Wednesday, March 28, 2012

                                             ಶಾಲಾ ವಾರ್ಷಿಕೋತ್ಸವ             ಬೆಳಗ್ಗೆ ಗಂಟೆ 9.30 ಕ್ಕೆ ಸರಿಯಾಗಿ ಶ್ರೀಯುತ ಅರವಿಂದ ಕುಮಾರ್ , ಸೀನಿಯರ್ ಸುಪರಿಂಟೆಂಡೆಂಟ್ ಎ.ಇ.ಒ.ಆಫೀಸ್,ಕುಂಬಳೆ  ರವರು ಧ್ವಜಾರೋಹಣ ಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯಿತ್ತರು .ಶಾಲಾ ವ್ಯವಸ್ಥಾಪಕರು  ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಯುತ ವಿವೇಕಾನಂದ ಬಿ.ಕೆ. ಹಾಗೂ ಅನೇಕ ಮಂದಿ ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾದರು. ಸಿಹಿತಿಂಡಿ ವಿತರಣೆಯ ಬಳಿಕ ಎಲ್.ಪಿ., ಯು.ಪಿ. ಹಾಗೂ ಅಂಗನವಾಡಿ ಮಕ್ಕಳಿಂದ ಛದ್ಮವೇಷ ಸ್ಪರ್ಧೆ ಜರಗಿತು.










 
        ಅಪರಾಹ್ಣ ಗಂಟೆ ೩.೩೦ ರಿಂದ ಶಾಲಾ ಹಳೆವಿದ್ಯಾರ್ಥಿ ಮೋಹನ ಆಚಾರ್ಯ ಎಸ್.ಕೆ.ಯವರಿಂದ ಟೆಲಿಫಿಲಂ ಪ್ರದರ್ಶನಗೊಂಡಿತು.ಶಾಲಾ ಸಂಗೀತ ವಿದ್ಯಾರ್ಥಿಗಳಿಂದ 15 ನಿಮಿಷದ ಕಾರ್ಯಕ್ರಮದ ಬಳಿಕ 4.30 ರಿಂದ ಸಭಾ ಕಾರ್ಯಕ್ರಮ ಜರಗಿತು.
 


    ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ಕರುಣಾಕರ ಅನಂತಪುರ ಅವರ ಅಧ್ಯಕ್ಷತೆಯಲ್ಲಿ, ನೆರೆಯ ವಾಣೀನಗರ ಶಾಲೆಯ ಪ್ರಾಂಶುಪಾಲ ಶ್ರೀ ನಾರಾಯಣ ರಾವ್ ರವರು ಪ್ರಧಾನ ಅಭ್ಯಾಗತರಾಗಿ ಭಾಷಣ ಮಾಡಿದರು.

      ಇದೇ ಸಂದರ್ಭದಲ್ಲಿ ನಮ್ಮೀ ಶಾಲೆಯ ಹಿರಿಯ ವಿದ್ಯಾರ್ಥಿ ಸಾಧಕರಾದ ಶ್ರೀ ಶ್ರೀಧರ ಪಡ್ರೆ (ಯಕ್ಷಗಾನ ಚೆಂಡೆ ಮದ್ದಳೆವಾದಕ), ಶ್ರೀ ಪ್ರವೀಣ್ ಪಿ.ಬಿ.(ಟೆಕ್ನಿಕಲ್ ಅಸಿಸ್ಟಂಟ್), ಶ್ರೀ ಮೋಹನ ಪಡ್ರೆ (ಚಿತ್ರಕಾರ,ಟೆಲಿಫಿಲಂ ನಿರ್ದೇಶಕ) ಶ್ರೀ ಪ್ರಶಾಂತ ಆಚಾರ್ಯ (ಶಿಲ್ಪಿ ಕಾರ್ಕಳ), ಕುಮಾರಿ ಐಶ್ವರ್ಯಾ ಎಸ್.ಕೆ. (ರಿಸರ್ಚ್ ಎಸೋಸಿಯೇಟ್, ಎಪೊಟೆಕ್ಸ್, ಬೆಂಗಳೂರು) ಯವರನ್ನು ಅಭಿನಂದಿಸಲಾಯಿತು.

 
                                                                                        


 

             ಇನ್ನೋರ್ವ ಅತಿಥಿಗಳಾದ ಶ್ರೀ ಬಾಳಿಕೆ ಗಣಪತಿ ಭಟ್ (ಮೇನೇಜರ್, ಇನ್ಫೋಸಿಸ್ ಮಂಗಳೂರು ) ಇವರಿಂದ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 





ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದರು ಧನ್ಯವಾದವಿತ್ತರು.
ವಿದ್ಯಾರ್ಥಿನಿಯರಾದ ಕುಮಾರಿ ಶ್ರುತಿ.ಕೆ. ಹಾಗೂ ಕುಮಾರಿ ಚೈತ್ರಾ.ಕೆ.ಯವರು ಕಾರ್ಯಕ್ರಮ ನಿರೂಪಿಸಿದರು.

     ಉಪಾಹಾರದ ಬಳಿಕ ರಾತ್ರಿ ಗಂಟೆ 8.00ರಿಂದ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಾದ ನೃತ್ಯ - ನಾಟಕಗಳು ಪ್ರದರ್ಶನಗೊಂಡವು. ಈ ಸಂದರ್ಭದಲ್ಲಿ ನಾಟ್ಯ ಗುರು ಶ್ರೀ ಸಬ್ಬಣಕೋಡಿ ರಾಮಭಟ್ ನಿರ್ದೇಶನದಲ್ಲಿ  ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕಲಾ ಉಚಿತ ತರಬೇತಿ ಕೇಂದ್ರ ಇದರ ಎಳೆಯ ಕಲಾವಿದರಿಂದ ವೀರ ಬಬ್ರುವಾಹನಯಕ್ಷಗಾನ ಬಯಲಾಟ ನಡೆಯಿತು.   
              
                           



                                       ಕೃಷಿ ಮಾಹಿತಿ ವಿಶೇಷ ಶಿಬಿರ
              ರಕ್ಷಕ - ಶಿಕ್ಷಕ ಸಂಘ, ಮಾತೃ ಸಂಗಮ ಹಾಗೂ ಕಾಸರಗೋಡು ಸಿಪಿಸಿಆರ್‌ಐ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ  ನಮ್ಮ ಶಾಲಾ ಮಕ್ಕಳಿಗೆ ಹಾಗೂ ಆಸಕ್ತ ಕೃಷಿಕರಿಗೆ ಒಂದು ದಿನದ ಕೃಷಿ ಮಾಹಿತಿ ವಿಶೇಷ ಶಿಬಿರ ಜರಗಿತು.
         

         ಕಾರ್ಯಕ್ರಮವನ್ನು ಖ್ಯಾತ ಪರಿಸರವಾದಿ ಹಾಗೂ ಜಲತಜ್ಞ ಶ್ರೀ ಪಡ್ರೆ ಯವರು ಶಾಲಾ ವಠಾರದಲ್ಲಿ ಬೀಜ ಬಿತ್ತುವ ಮೂಲಕ ಉದ್ಘಾಟಿಸಿದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ರವಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಪಂಚಾಯಿತಿ ಕೃಷಿ ಭವನ ಅಧಿಕಾರಿ ಮೀರಾ.ಎಸ್.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರ ಕಾರ್ಯಕ್ರಮ ಸಮನ್ವಯಾಧಿಕಾರಿ ಡಾ.ಮನೋಜ್ ಕುಮಾರ್, ಕೃಷಿ ವಿಷಯ ತಜ್ಞರಾದ ಡಾ.ಎಸ್.ಲೀನಾ, ಶೋಭ.ಎಸ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಕಾರಿ ಕೃಷಿಯ ಬಗ್ಗೆ ಮಾಹಿತಿ ನೀಡಿರರು.
     

        ಈ ಸಂದರ್ಭದಲ್ಲಿ ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್. ಕೊಡುಗೆಯಾಗಿ ನೀಡಿದ ಸ್ಪ್ರೇಯರ್‌ನ್ನು ಕೃಷಿ ಅಧಿಕಾರಿ ಮೀರಾರವರು ಶಾಲೆಯ ಇಕೋ ಕ್ಲಬ್ ಸದಸ್ಯ ಪ್ರಸನ್ನ ಕುಮಾರ್.ಬಿ ಅವರಿಗೆ ಹಸ್ತಾಂತರಿಸಿದರು.ಶಾಲಾ ಮುಖ್ಯ ಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿ ಮಾಳವಿಕಾ.ಎಸ್. ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಎಸ್.ಎನ್.ವೆಂಕಟ ವಿದ್ಯಾಸಾಗರರು ವಂದಿಸಿದರು.



                      
                      ವಿವೇಕಾನಂದ ಜಯಂತಿ 
        ಏಳನೇ  ತರಗತಿಯ  ವಿದ್ಯಾರ್ಥಿನಿ ಕುಮಾರಿ ಮೇಘಾ.ಎಸ್.ಎಮ್.ರವರು ವಿವೇಕಾನಂದರಾಗಿ ತಾನು ಚಿಕಾಗೋ ನಗರದಲ್ಲಿ ಮಾಡಿದ ವಿಶ್ವ ಪ್ರಸಿದ್ಧಗೊಂಡ ಭಾಷಣದ ಅಣಕು  ಪ್ರದರ್ಶನವನ್ನು ಶಾಲಾ ಅಸೆಂಬ್ಲಿಯಲ್ಲಿ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ವಿವೇಕಾನಂದರ ಜೀವನ ಆದರ್ಶಗಳನ್ನು ವಿವರಿಸಿ ಮಕ್ಕಳಲ್ಲಿ ಸ್ಫೂರ್ತಿ ತುಂಬಿದರು. 
                      Spoken English Class   (December 26 to 30)
         ಮಾತುಗಾರಿಕೆಯಲ್ಲಿ ಇಂಗ್ಲೀಷ್‌ನ್ನು ಬೆಳೆಸುವ ಉದ್ದೇಶದಿಂದ ಶಾಲೆಯಲ್ಲಿ ಕ್ರಿಸ್ಮಸ್ ರಜೆಯ ಅವಧಿಯಲ್ಲಿ ಯು.ಪಿ. ತರಗತಿಯ ಆಸಕ್ತ ಮಕ್ಕಳಿಗೆ ಒಂದು ವಾರದ ಕಾಲ Spoken English  ತರಗತಿಯನ್ನು ನಡೆಸಲಾಯಿತು. ನಮ್ಮ ಶಾಲಾ ಹಳೆವಿದ್ಯಾರ್ಥಿನಿಯರಾದ ಕುಮಾರಿ ಸರಸ್ವತಿ.ಡಿ. ಹಾಗೂ ಕುಮಾರಿ ಕಮಲಾಕ್ಷಿ.ಪಿ.ಯವರು ಜಂಟಿಯಾಗಿ ಈ ತರಗತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.ಶಾಲಾ ಮುಖ್ಯೋಪಾಧ್ಯಾಯರು ತರಗತಿಯನ್ನು ಉದ್ಘಾಟಿಸಿ ಇಂಗ್ಲೀಷ್ ಕಲಿಕೆಯ ಔಚಿತ್ಯವನ್ನು ವಿವರಿಸಿದರು.ಬೆಳಗ್ಗೆ 10.00 ರಿಂದ  ಮಧ್ಯಾಹ್ನ 12.15 ರ ತನಕ ನಡೆದ ತರಗತಿಯಲ್ಲಿ ಮಕ್ಕಳಿಗೆ ಸಂದರ್ಭಕ್ಕನುಸಾರವಾಗಿ ವಾಕ್ಯ ರಚನಾ ಕೌಶಲ,ಸರಳ ವ್ಯಾಕರಣ ಹಾಗೂ ಎಲ್.ಸಿ.ಡಿ ಯಲ್ಲಿ ಸೂಕ್ತ ಸಿ.ಡಿ.ಗಳ ಪ್ರದರ್ಶನವನ್ನು ಮಾಡಲಾಯಿತು. 



Tuesday, March 27, 2012

                     ಸಹವಾಸ ಶಿಬಿರ ಡಿಸೆಂಬರ್.23 & 24


                               
         ಡಯಟ್ ಮಾಯಿಪ್ಪಾಡಿಯ ಅಧ್ಯಾಪಕ ವಿದ್ಯಾರ್ಥಿಗಳು 4 ನೇ ತರಗತಿಯ ಮಕ್ಕಳಿಗೆ ವಿಶೇಷವಾಗಿ ಆಯೋಜಿಸಿದ ಎರಡು ದಿನಗಳ ಸಹವಾಸ ಶಿಬಿರವು ಡಿಸೆಂಬರ್ ತಿಂಗಳ 23 ಮತ್ತು 24ನೇ ತಾರೀಕಿನಂದು ಸ್ವರ್ಗ ಸ್ವಾಮೀ ವಿವೇಕಾನಂದ ಶಾಲೆಯಲ್ಲಿ ಜರಗಿತು.ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ವಿವೇಕಾನಂದ ಬಿ.ಕೆಯವರ ಅಧ್ಯಕ್ಷತೆಯಲ್ಲಿ ಸಮಾರಂಭವನ್ನು ವಾರ್ಡ್ ಸದಸ್ಯ ಶ್ರೀ ರವಿ.ಕೆ ಯವರು ನವೀನ ರೀತಿಯಲ್ಲಿ ಉದ್ಘಾಟಿಸಿದರು.
           ಹಲವು ತರದ ಆಟಗಳು, ಹಾಡು-ಕುಣಿತ, ಪ್ರಯೋಗ, ಗಣಿತ,ಪರಿಸರ, ಭಾಷೆ, ಸಿ.ಡಿ. ಪ್ರದರ್ಶನ. ಶಿಬಿರಾಗ್ನಿಯೇ ಮುಂತಾದ ಹಲವು ಚಟುವಟಿಕೆಗಳಲ್ಲಿ ಅಧ್ಯಾಪಕ ವಿದ್ಯಾರ್ಥಿಗಳ ಜತೆಯಲ್ಲಿ ಶಿಬಿರಾರ್ಥಿಗಳು ಬಹಳ ಸಂತೋಷದಿಂದ ಭಾಗವಹಿಸಿದರು. ಡಯಟ್ ಮಯಿಪ್ಪಾಡಿಯ ಉಪನ್ಯಾಸಕರಾದ ಶ್ರೀಯುತ ಶಶಿಧರ ಸರ್‌ರವರು ಎರಡು ದಿನವೂ ನಮ್ಮೊಂದಿಗಿದ್ದು ಸಂಪೂರ್ಣ ಜವಾಬ್ದಾರಿಯನ್ನು ಹೊತ್ತ ಅಧ್ಯಾಪಕ ವಿದ್ಯಾರ್ಥಿಗಳನ್ನು ತೆರೆಮರೆಯಿಂದ ವೀಕ್ಷಿಸುತ್ತಿದ್ದರು. ಶಿಬಿರಾರ್ಥಿಗಳು,ಅಧ್ಯಾಪಕರು, ಅಧ್ಯಾಪಕ ವಿದ್ಯಾರ್ಥಿಗಳು, ಮುಖ್ಯೋಪಾಧ್ಯಾಯರು, ಉಪನ್ಯಾಸಕರು ತಮ್ಮ ಅನುಭವಗಳನ್ನು ಹೇಳುವುದರೊಂದಿಗೆ ಶಿಬಿರ ಸಮಾಪನಗೊಂಡಿತು.