Wednesday, July 29, 2015


ಸಾಕ್ಷರ ಯೋಜನೆ-ಉದ್ಘಾಟನೆ

          ನಮ್ಮ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪುರೋಗತಿಗಾಗಿ ಸಾಕ್ಷರ ಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯನ್ನು ದಿನಾಂಕ:೨೮.೦೭.೨೦೧೫ನೇ ಮಂಗಳವಾರದಂದು ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್‌ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಯೋಜನೆಯ ಪ್ರಯೋಜನವನ್ನು ಸರಿಯಾಗಿ ಸದುಪಯೋಗ ಪಡಿಸಿ, ಮುಂದಿನ ವರ್ಷಗಳಲ್ಲಿ ಎಲ್ಲರು ಓದು, ಬರಹಗಳಲ್ಲಿ ಪರಿಣತಿ ಪಡೆದು ತರಗತಿ ಚಟುವಟಿಕೆಗಳಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಈ ಸಂದರ್ಭದಲ್ಲಿ ಅವರು ನುಡಿದರು. ಸಂಸ್ಕ್ರತ ಶಿಕ್ಷಕರಾದ ಶ್ರೀ ಶಿವರಾಮ್ ಭಟ್.ಕೆ ಯವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು.
ಸಾಕ್ಷರ ಯೋಜನೆಯಲ್ಲಿ ಭಾಗಿಯಾಗಲು ಅರ್ಹತೆ ಪಡೆದ ಮಕ್ಕಳಿಗೆ ಬರವಣಿಗೆಗೆ ನೋಟು ಪುಸ್ತಕವನ್ನು ಪಿ.ಟಿ.ಎ ವತಿಯಿಂದ ನೀಡಲಾಯಿತು. ಎಲ್.ಪಿ ಮತ್ತು ಯು.ಪಿ ತರಗತಿಗಳಿಗೆ ಪ್ರತ್ಯೇಕ ಎರಡು ಗುಂಪು ಮಾಡಿ ಶಿಕ್ಷಕರೇ ತಯಾರಿಸಿದ ಮೊಡ್ಯುಲ್‌ನ್ನು ಉಪಯೋಗಿಸಿ ತರಗತಿಯನ್ನು ಆರಂಭಿಸಲಾಯಿತು. 




Tuesday, July 28, 2015


ಎ.ಪಿ.ಜೆ ಅಬ್ದುಲ್ ಕಲಾಂ-ಭಾವ ಪೂರ್ಣ ನುಡಿ ನಮನ

          ಭಾರತದ ಧ್ರುವತಾರೆ, ಮಾಜಿ ರಾಷ್ಟ್ರಪತಿ, ಕ್ಷಿಪಣಿ ಪಿತಾಮಹ, ಭಾರತ ರತ್ನ ಎ.ಪಿ.ಜೆ ಅಬ್ದುಲ್ ಕಲಾಂ ಅವರಿಗೆ  ವಿಜ್ಞಾನ  ಸಂಘದ ವತಿಯಿಂದ ಭಾವ ಪೂರ್ಣ ನುಡಿ ನಮನವನ್ನು ಮೌನ ಪ್ರಾರ್ಥನೆಯ ಮೂಲಕ ಅರ್ಪಿಸಲಾಯಿತು. ವಿಜ್ಞಾನ ಶಿಕ್ಷಕರಾದ ವೆಂಕಟವಿದ್ಯಾಸಾಗರ್‌ರವರು ಕಲಾಂರವರ ವ್ಯಕ್ತಿ ಪರಿಚಯ ಸಾಧನೆಗಳ ಮಾಹಿತಿಯನ್ನಿತ್ತರು. 



Monday, July 27, 2015


ಚಾಂದ್ರ ದಿನ- ಜುಲೈ ೨೧

ನಮ್ಮ ಶಾಲೆಯಲ್ಲಿ ಚಾಂದ್ರ ದಿನದ ಅಂಗವಾಗಿ ವಿeನ ಕ್ಲಬಿನ ವತಿಯಿಂದ ಜುಲೈ ೨೧ ರಂದು ಕಾರ್ಯಕ್ರಮ ಜರಗಿತು. ಸ್ವರ್ಗ ತರಂಗ ರೇಡಿಯೋ ದಲ್ಲಿ ಚಾಂದ್ರದಿನ ವಿವರಣೆಯನ್ನು ಸಂಘದ ಸದಸ್ಯರು ಬಿತ್ತರಿಸಿದರು. ಶಾಲಾ ಬಾಲೋದ್ಯಾನದಲ್ಲಿ ಚಾಂದ್ರಯಾನಕ್ಕೆ ಸಂಬಂಧಿಸಿದ ಚಿತ್ರಗಳನ್ನು ಪ್ರದರ್ಶಿಸಲಾಯಿತು. ನಂತರ ಚಾಂದ್ರಯಾನಕ್ಕೆ ಸಂಬಂಧಿಸಿದ ಸ್ಲೈಡ್ ಪ್ರದರ್ಶಿಸಲಾಯಿತು. ಚಾಂದ್ರಯಾನಕ್ಕೆ ಸಂಬಂಧಿಸಿದ ವ್ಯಕ್ತಿಗಳು, ಯಾನಕ್ಕೆ ಸಂಬಂಧಿಸಿದ ನೌಕೆ, ಚಂದ್ರನ ಮೇಲಿನ ವಾತಾವರಣ ಇವುಗಳಿಗೆ ಪೂರಕವಾದ ಫೋಟೋ ಹಾಗೂ ವೀಡಿಯೋವನ್ನು ಪ್ರದರ್ಶಿಸಿದರು. ಅದಕ್ಕೆ ಅನುಗುಣವಾಗಿ ಪೂರಕ ಮಾಹಿತಿಯನ್ನು ವಿಜ್ಞಾನ ಶಿಕ್ಷಕ ವೆಂಕಟ ವಿದ್ಯಾಸಾಗರ್‌ರವರು ನೀಡಿದರು.  

Tuesday, July 21, 2015


 ಮಾತೃ ಸಂಘದ ಸಭೆ - ಜುಲೈ ೯

ನಮ್ಮ ಶಾಲೆಯಲ್ಲಿ ಮಾತೃ ಸಂಘದ ಈ ಶೈಕ್ಷಣಿಕ ವರ್ಷದ ಮೊದಲ ಸಭೆಯು ದಿನಾಂಕ ೯ ಜುಲೈ ೨೦೧೫ ರಂದು ಜರಗಿತು. ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ. ಶಿವರಾಮ್ ಭಟ್ ಹಾಗೂ ಮಾತೃ ಸಂಘದ ಉಪಾಧ್ಯಕ್ಷೆ ಶ್ರೀಮತಿ ನಳಿನಿಯವರು ಉಪಸ್ಥಿತರಿದ್ದರು. 
ಸಂಘದ ಕಾರ್ಯದರ್ಶಿ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿಯವರು ಈ ವರ್ಷ ಕೈಗೊಳ್ಳುವ ಕಾರ್ಯ ಚಟುವಟಿಕೆಗಳ ಕಿರು ಮಾಹಿತಿಯನ್ನಿತ್ತರು. ಈ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸುವುದರ ಕುರಿತು ಒಂದೊಂದೆ ವಿಚಾರಗಳನ್ನು ಚರ್ಚೆಗೆ ಇಟ್ಟು ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಯಿತು. ಸುಮಾರು ೫೦ ಮಂದಿ ಮಾತೆಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕಿಯರಾದ ಶ್ರೀಮತಿ ಕಲಾವತಿ ಸ್ವಾಗತಿಸಿ ಶ್ರೀಮತಿ ಗೀತಾಂಜಲಿಯವರು ಕಾರ್ಯಕ್ರಮಕ್ಕೆ ವಂದನಾರ್ಪಣೆಗೈದರು. 





ಹೆಣ್ಣು ಮಕ್ಕಳಿಗೆ ವಿಶೇಷ ತರಗತಿ

ನಮ್ಮ  ಶಾಲೆಯಲ್ಲಿ ಯು.ಪಿ ವಿಭಾಗದ ಹೆಣ್ಣು ಮಕ್ಕಳಿಗೆ ವಿಶೇಷ ತರಗತಿ ಜರಗಿತು. ಪೆರ್ಲ ಪಿ.ಎಚ್.ಸಿ ಯ ಸಿಸ್ಟರ್ ಪ್ರೇಮರವರು ಹದಿಹರೆಯ ಸಮಸ್ಯೆ, ಮುಂಜಾಗ್ರತೆ, ಪೋಷಕ ಹಾಗೂ ಸಮತೂಕದ ಆಹಾರ, ವ್ಯಕ್ತಿ ಶುಚಿತ್ವ, ಪರಿಸರ ಶುಚಿತ್ವದ ಪ್ರಾಧಾನ್ಯತೆ ಹಾಗೂ ಕೊರತೆ, ಚೈಲ್ಡ್ ಲೈನ್‌ನ ಪ್ರಾಮುಖ್ಯತೆ, ವ್ಯಾಯಾಮ ಇವೆಲ್ಲವುಗಳ ಸಮಗ್ರ ಮಾಹಿತಿಯನ್ನು ಮಕ್ಕಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಕ್ಕಳ ಸಮಸ್ಯೆಗೆ ಪರಿಹಾರ ಮಾರ್ಗವನ್ನು ಸೂಚಿಸುವ ಮೂಲಕ ಸ್ವಂದನೆಯಿತ್ತರು. ವಾಣೀನಗರ ಪಿ.ಎಚ್.ಸಿ ಯ ಸಿಸ್ಟರ್ ಸೂರಜಾ ೬ನೇ ವಾರ್ಡಿನ ಆಶಾವರ್ಕರ್ ಶ್ರೀಮತಿ ಚಂದ್ರಾವತಿ ಎ.ಟಿ ಹಾಗೂ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಗೀತಾಂಜಲಿ ವಂದಿಸಿದರು. 






ಸುವರ್ಣ ಕೇರಳ ಯೋಜನೆ-ಶಾಲಾ ಮಕ್ಕಳಿಗೆ ಗಿಡ ವಿತರಣೆ

ಸುವರ್ಣ ಕೇರಳ ಯೋಜನೆಯ ಮೂಲಕ ಪೆರ್ಲ ಸರ್ವಿಸ್ ಕೋಪರೇಟಿವ್ ಬ್ಯಾಂಕ್‌ನ ವತಿಯಿಂದ ನಮ್ಮ ಮಕ್ಕಳಿಗೆ ಕೊಡ ಮಾಡಿದ ವಿವಿಧ ಜಾತಿಯ ಮರಗಳ ಸಸಿಯನ್ನು ಸರ್ವಿಸ್ ಕೊಪರೇಟಿವ್ ಬ್ಯಾಂಕ್ ಸ್ವರ್ಗ ಘಟಕದ ಅಧಿಕಾರಿ ಜಯಪ್ರಕಾಶ್ ವಿತರಿಸಿದರು. ಬ್ಯಾಂಕ್ ಅಧಿಕಾರಿಗಳಾದ ಪದ್ಮನಾಭ ಮತ್ತು ರಾಮಕೃಷ್ಣ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ. ಶಿವರಾಮ್ ಭಟ್ ಉಪಸ್ಥಿತರಿದ್ದರು. 

Tuesday, July 7, 2015


ಬಯೋಗ್ಯಾಸ್ ಪ್ಲಾಂಟ್‌ನ ಉದ್ಘಾಟನಾ ಕಾರ್ಯಕ್ರಮ

      ನಮ್ಮ ಶಾಲೆಯಲ್ಲಿ ನೇಚರ್ ಕ್ಲಬಿನ ವತಿಯಿಂದ ಬಯೋಗ್ಯಾಸ್ ಪ್ಲಾಂಟ್‌ನ ಉದ್ಘಾಟನಾ ಕಾರ್ಯಕ್ರಮ ಜರಗಿತು. ಕೇರಳ ರಾಜ್ಯ ಕೃಷಿ ಇಲಾಖೆ ಹಾಗೂ ಎಣ್ಮಕಜೆ ಗ್ರಾಮ ಪಂಚಾಯತ್‌ನ ಸಹಯೋಗದೊಂದಿಗೆ ಲಭಿಸಿದ ಬಯೋಗ್ಯಾಸ್ ಪ್ಲಾನ್ಟ್‌ನ್ನು ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸೋಮಶೇಖರ್ ಜೆ.ಎಸ್ ರವರು ಗ್ಯಾಸ್ ಸ್ಟವ್‌ನ್ನು ಉರಿಸುವುದರ ಮುಖಾಂತರ ಉಧ್ಘಾಟಿಸಿದರು. ಎಣ್ಮಕಜೆ ಕೃಷಿಭವನದ ಕೃಷಿ ಅಧಿಕಾರಿ ಶ್ರೀಮತಿ ಮೀರಾರವರು ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಜೈವಿಕ ಅವಶೇಷಗಳ ಸೂಕ್ತ ಸಂಸ್ಕರಣೆ, ಶಾಲಾ ಕೈತೋಟಕ್ಕೆ ಉತ್ತಮ ಸಾವಯವ ಗೊಬ್ಬರ ತಯಾರಿ, ಮಕ್ಕಳ ದಿನ ನಿತ್ಯದ ಕುಡಿನೀರಿಗಾಗಿ ಬಿಸಿನೀರಿನ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಅಲ್ಪ ಪ್ರಮಾಣದ ಅಡುಗೆ ಅನಿಲ ತಯಾರಿ ಈ ಮೂರು ಧ್ಯೇಯವನ್ನು ಈ ಯೋಜನೆಯಿಂದ ಸಿದ್ಧಿಸಲು ಸಾಧ್ಯ  ಎಂದರು.
ಎಣ್ಮಕಜೆ ಕೃಷಿಭವನದ ಸಹಾಯಕ ಕೃಷಿ ಅಧಿಕಾರಿ ಶ್ರೀ ಕರುಣಾಕರ್ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲಕ್ಷ್ಮಿಪ್ರಿಯ ಶರಳಾಯ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಉಪಸ್ಥಿತರಿದ್ದರು. ನೇಚರ್ ಕ್ಲಬಿನ ಸದಸ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ಸ್ವಾಗತಿಸಿ, ಶಿಕ್ಷಕ ಸಚ್ಚಿದಾನಂದ.ಎಸ್ ವಂದಿಸಿದರು.





Thursday, July 2, 2015



ನಸು ನಗುವ ಹೂಗಳು 





3 ನೇ  ತರಗತಿಯ ' ಮೊಗ್ಗರಳಿ ಹೂವಾಗಿ '  ಎಂಬ ಪರಿಸರ ಅಧ್ಯಯನ  ಪಾಠ ಭಾಗಕ್ಕೆ ಸಂಬಂಧಿಸಿ ನಡೆಸಿದ ಪುಷ್ಪ ಪ್ರದರ್ಶನದಲ್ಲಿ  ನಸು ನಗುತಿರುವ ಹೂಗಳು.  

 ವಿಶ್ವ ವೈದ್ಯರ ದಿನಾಚರಣೆ

     ಜನ ಸಾಮಾನ್ಯರ ಆರೋಗ್ಯವನ್ನು ರಕ್ಷಿಸುವ, ಅನಾರೋಗ್ಯ ಪೀಡಿತರಾದಾಗ ಸೂಕ್ತ ಚಿಕಿತ್ಸೆಯನ್ನು ನೀಡಿ ಗುಣಪಡಿಸುವ, ಮರುಜನ್ಮ ನೀಡುವ ಹಾಗೂ ರೋಗಿಗಳಿಗೆ ಸಾಂತ್ವನ ನೀಡುವ ಸಲುವಾಗಿ ಹಗಲಿರುಳು ಶ್ರಮಿಸುವ ವೈದ್ಯರಿಗೆ ಕೃತಜ್ಞತೆ ಸಲ್ಲಿಸುವವುದರ ಜೊತೆಗೆ ಡಾ.ಬಿ.ಸಿ ರಾಯ್ ಇವರ ಜನ್ಮದಿನವನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. 
ಈ ನಿಟ್ಟಿನಲ್ಲಿ ನಮ್ಮ  ಶಾಲೆಯಲ್ಲಿ ಶಾಲಾ ಪರಿಸರದ ವೈದ್ಯರಾಗಿರುವ, ಎಂಡೋಸಲ್ಫಾನ ಸಿಂಪಡನೆಯ ವಿರುದ್ಧ ಹೋರಾಟ ನಡೆಸಿದ ಮೋಹನ್ ಕುಮಾರ್ ವೈ.ಎಸ್ ಇವರ ಕ್ಲಿನಿಕ್‌ಗೆ ವಿeನ ಸಂಘದ ಸದಸ್ಯರು ಹಾಗೂ ಸಂಚಾಲಕ ಶಿಕ್ಷಕ ವೆಂಕಟ ವಿದ್ಯಾಸಾಗರರವರು ತೆರಳಿ ಪುಷ್ಪ ಗುಚ್ಛ ಹಾಗೂ ಶುಭಾಷಯ ಪತ್ರ ನೀಡಿ ತಮ್ಮ ಸೇವೆಗೆ ಶುಭಾಷಯ ಕೋರಿದರು. ಶಾಲಾ ಎಸೆಂಬ್ಲಿಯಲ್ಲಿ ಸಂಘದ ಸದಸ್ಯೆ ಕುಮಾರಿ ಕವಿತಾಲಕ್ಷ್ಮಿ ವೈದ್ಯರ ದಿನದ ಆಚರಣೆಯ ಕುರಿತಾದ ಪ್ರಬಂಧ ಮಂಡಿಸಿದರು. ಶಾಲಾ ಮುಖ್ಯೋಪಾಧ್ಯಾಯ  ಶ್ರೀ.ಪಿ ಶಿವರಾಮ ಭಟ್‌ರವರು ಇನ್ನಷ್ಟು ಮಾಹಿತಿಯನ್ನಿತ್ತರು. 


ಹಲಸಿನ ಸೋಳೆ ದಾಸ್ತಾನು ಕಾರ್ಯಾಗಾರ

   ಮಳೆಗಾಲದಲ್ಲಿ ತರಕಾರಿ ವಿರಳ, ಬೆಲೆ ದುಬಾರಿ ಹಾಗೂ ಶಾಲಾ ಪರಿಸರದಲ್ಲಿ ಸಿಗುವ ಬೆಳೆ ಕಡಿಮೆ ಇದಕ್ಕೆಲ್ಲಾ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪರಿಸರದಲ್ಲೇ ದೊರಕುವ ತಾಜಾ ರಾಸಾಯನಿಕ ಮುಕ್ತ ಹಲಸು ಬಲು ಸೊಗಸು. ಈ ನಿಟ್ಟಿನಲ್ಲಿ ನಮ್ಮ  ಶಾಲೆಯಲ್ಲಿ ಶಾಲಾ ಪರಿಸರದ ಹಲಸಿನ ಕಾಯಿಗಳನ್ನು ಕೊದು ಉಪ್ಪಿನಲ್ಲಿ ದಾಸ್ತಾನು ಮಾಡುವ ಕಾರ್ಯಾಗಾರ  ಮಕ್ಕಳು, ರಕ್ಷಕರು, ಶಿಕ್ಷಕರು ಸೇರಿಕೊಂಡು ನಡೆಯಿತು.





ಮಾದಕ ವಸ್ತು ವಿರೋಧಿ ದಿನ
ನಮ್ಮ  ಶಾಲೆಯಲ್ಲಿ ಮಾದಕವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ಶಾಲಾ ಎಸೆಂಬ್ಲಿಯಲ್ಲಿ ಮಾದಕ ವಸ್ತುಗಳನ್ನು ಸೇವಿಸದಂತೆ ಪ್ರತಿಜ್ಞಾ ಸ್ವೀಕಾರ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರು ಮಾದಕ ವಸ್ತುಗಳನ್ನು ಸೇವಿಸುವುದರಿಂದ ಆಗುವ ಅನಾಹುತವನ್ನು ತಿಳಿಸಿದರು.


ವಾಚನ ಸಪ್ತಾಹದ  ಸಮಾರೋಪ ಸಮಾರಂಭ
   ನಮ್ಮ ಶಾಲೆಯಲ್ಲಿ ವಾಚನ ಸಪ್ತಾಹದ ಸಮಾರೋಪ ಸಮಾರಂಭ ಜರಗಿತು. ಇದರ ಅಂಗವಾಗಿ ಮಕ್ಕಳು ತರಗತಿವಾರಾಗಿ ರಚಿಸಿದ ಹಸ್ತಪತ್ರಿಕೆಯನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ಪದ್ಮನಾಭ ಶೆಟ್ಟಿ ಬಿಡುಗಡೆಗೊಳಿಸಿದರು. ಸ್ಪರ್ಧಾತ್ಮಕ ಯುಗದಲ್ಲಿ ಅಸ್ಥಿತ್ವ ಸ್ಥಾಪಿಸಲು ಅಪಾರ eನ ಭಂಡಾರದ ಅಗತ್ಯವಿದೆ. ಇದನ್ನು ಸಾಧಿಸಲು ನಾವು ಪುಸ್ತಕ ಪ್ರೇಮಿ ಹವ್ಯಾಸಿಗಳು ಆಗಬೇಕು. ಆಧುನಿಕ ಮಾಧ್ಯಮದ ಪ್ರಭಾವ ಓದನ್ನು ಕುಂಠಿತಗೊಳಿಸುತ್ತದೆ. ಆದರೆ ಓದಿನ ಮಹಾಯಜ್ಞದಲ್ಲಿ ಭಾಗಿಯಾಗುವ ಮಹಾನ್ ಭಾಗ್ಯ ನಿಮಗೆ ದೊರೆತಿದೆ ಎಂದು ಅವರು ತಮ್ಮ ಉಧ್ಘಾಟನಾ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷೀಪ್ರಿಯ ಶರಳಾಯರು ಓದೋಣ, ಓದಿದನ್ನು ಅರ್ಥೈಯಿಸಿಕೊಳ್ಳೋಣ, ಅದನ್ನು ಜೀವನದಲ್ಲಿ ಅಳವಡಿಸೋಣ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವ್ಯಕ್ತಪಡಿಸಿದರು. ತಾವು ಓದಿದ ಪುಸ್ತಕದ ವಿಮರ್ಶೆ ಮಕ್ಕಳಿಂದ ಹಾಗೂ ಶಿಕ್ಷಕರಿಂದ ನಡೆಯಿತು. ವಿದ್ಯಾರ್ಥಿಗಳಾದ ತಿಲಕ್‌ರಾಜ್ ಹಾಗೂ ಅಭಯ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ಶ್ವೇತಾ, ವಿದ್ಯಾಲಕ್ಷ್ಮಿ ಹಾಗೂ ಮಮತ ಪ್ರಾರ್ಥಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ಸ್ವಾಗತಿಸಿ, ಶಿಕ್ಷಕ ಕೆ.ಶಿವರಾಮ್ ಭಟ್ ಧನ್ಯವಾದಗೈದರು.