Wednesday, September 10, 2014


ಉತ್ಥಾನ ಸಹವಾಸ ಶಿಬಿರದ ಸಮಾರೋಪ ಸಮಾರಂಭ
                 ನಮ್ಮ ಶಾಲೆಯಲ್ಲಿ  ಸಾಕ್ಷರಂ ಯೋಜನೆಯ ಅಂಗವಾಗಿ ನಡೆದ ದ್ವಿದಿನ ಸಹವಾಸ ಶಿಬಿರ ಉತ್ಥಾನ ಉದ್ಘಾಟನೆಯೊಂದಿಗೆ ಆರಂಭಗೊಂಡಿತು. ಹಲವು ಭಾಷಾ ಆಟ, ಚಟುವಟಿಕೆಗಳು,ನಿರ್ಮಾಣ ಚಟುವಟಿಕೆಗಳು, ಮೇಪ್ ಗುರುತಿಸುವುದು, ಹೊರಾಂಗಣ ಆಟ, ಭಜನೆ, ಜೀವ ವೈವಿಧ್ಯತೆಯ ಕುರಿತಾದ ಸಿ.ಡಿ. ಪ್ರದರ್ಶನ, ವ್ಯಾಯಾಮ, ಗಣಿತ ಚಟುವಟಿಕೆ, ನಾಟಕಾಭಿನಯಕ್ಕೆ ಪೂರಕ ಸಾಮಾಗ್ರಿಗಳ ತಯಾರಿ, ನಾಟಕ ಪ್ರದರ್ಶನ, ಇತ್ಯಾದಿ ಹಲವು ಚಟುವಟಿಕೆಗಳನ್ನು ನಡೆಸಲಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಲಕ್ಷ್ಮೀಪ್ರಿಯ ಸರಳಾಯ ಹಾಗೂ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್, ಶಾಲಾ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು. ೩ನೇ ತರಗತಿ ಯಿಂದ ಆರಂಭಿಸಿ ೭ನೇ ತರಗತಿಯವರೆಗಿನ ಸುಮಾರು ೨೬ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಿ.ಟಿ.ಎ ಅಧ್ಯಕ್ಷ ಶ್ರೀ ಲಕ್ಷ್ಮೀಪ್ರಿಯ ಸರಳಾಯರು ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ಹಾಗೂ ಹಿರಿಯ ಶಿಕ್ಷಕ ಕೆ.ಶಿವರಾಮ್ ಭಟ್ ಶಿಕ್ಷಕ ಉಪಸ್ಥಿತರಿದ್ದರು. ಮಕ್ಕಳು ತಮ್ಮ ಎರಡು ದಿನದ ಅನುಭವವನ್ನು ಹಂಚಿಕೊಂಡರು. ಶ್ರೀ ಸಚ್ಚಿದಾನಂದ.ಎಸ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಸವಿತ, ಭವ್ಯ, ರಕ್ಷಿತ ಪ್ರಾರ್ಥಿಸಿದರು, ಶಿಕ್ಷಕ ವೆಂಕಟವಿದ್ಯಾ ಸಾಗರರವರು ವಂದನಾರ್ಪಣೆ ಗೈದರು. 














Monday, September 8, 2014


ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆ, ಸ್ವರ್ಗ
ಅಂಚೆ : ಪಡ್ರೆ ಕಾಸರಗೋಡು - 671552
ಆತ್ಮೀಯರೇ,                                                                                    ಸ್ವರ್ಗ
                                                                                                05.09.2014
    ನಮ್ಮೀ ವಿದ್ಯಾಸಂಸ್ಥೆಯ  ಸಾಕ್ಷರಂ ಕಾರ್ಯಕ್ರಮದ ಅಂಗವಾಗಿ ಮಕ್ಕಳ ದ್ವಿದಿನ ಸಹವಾಸ ಶಿಬಿರ ಉತ್ಥಾನವನ್ನು ತಾರೀಕು 08.09.14 ಸೋಮವಾರ ದಿಂದ 09.09.2014ನೇ ಮಂಗಳವಾರದ ತನಕ ಶಾಲೆಯಲ್ಲಿ ಆಯೋಜಿಸಲಾಗಿದೆ. ವಿದ್ಯಾಭಿಮಾನಿಗಳಾದ ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ.
                                       ಕಾರ್ಯಕ್ರಮ ವಿವರ
                         
                          ದಿನಾಂಕ : 08.09.2014ನೇ ಸೋಮವಾರ
                           ಸಮಯ : ಪೂರ್ವಾಹ್ನ ಗಂಟೆ 10.00
                            ಸ್ಥಳ      :  ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆ ಸ್ವರ್ಗ 
                         ಅಧ್ಯಕ್ಷರು : ಶ್ರೀ ರವಿ.ಕೆ (ವಾರ್ಡು ಸದಸ್ಯರು)
                      ಉದ್ಘಾಟನೆ : ಶ್ರೀ ಬಿ.ಎಸ್.ಗಾಂಭೀರ (ಅಧ್ಯಕ್ಷರು ವಿದ್ಯಾಭ್ಯಾಸ ಸ್ಥಾಯೀ ಸಮಿತಿ 
                                          ಎಣ್ಮಕಜೆ ಪಂಚಾಯತು)
            ಮುಖ್ಯ ಉಪಸ್ಥಿತಿ :  ಶ್ರೀ ಲಕ್ಷ್ಮೀಪ್ರಿಯ ಸರಳಾಯ (ಪಿ.ಟಿ.ಎ ಅಧ್ಯಕ್ಷರು ಎಸ್.ವಿ.ಎ.ಯು.ಪಿ.ಶಾಲೆ,ಸ್ವರ್ಗ)
                                         ಶ್ರೀಮತಿ ಮಂಜರಿ ನವೀನ್ (ಮಾತೃ ಮಂಡಳಿ ಅಧ್ಯಕ್ಷೆ   
                                          ಎಸ್.ವಿ.ಎ.ಯು.ಪಿ.ಶಾಲೆ,ಸ್ವರ್ಗ)
                                   
                                           ಸರ್ವರಿಗೂ ಆದರದ ಸ್ವಾಗತ.
                                                                        
                                                                               ಶಾಲಾ ವ್ಯವಸ್ಥಾಪಕರು, 
                                                                     ರಕ್ಷಕ ಶಿಕ್ಷಕ ಸಂಘ & ಮಾತೃ ಸಂಗಮ
                                                      ಮುಖ್ಯೋಪಾಧ್ಯಾಯರು, ಅಧ್ಯಾಪಕರು,
 ಸಿಬ್ಬಂದಿ,ವಿದ್ಯಾರ್ಥಿವೃಂದ
                                                                     ಎಸ್.ವಿ.ಎ.ಯು.ಪಿ.ಶಾಲೆ,ಸ್ವರ್ಗ.


  ದ್ವಿದಿನ ಸಹವಾಸ ಶಿಬಿರಉತ್ಥಾನ ಉದ್ಘಾಟನೆ

ಸ್ವರ್ಗ ಸ್ವಾಮೀ ವಿವೇಕಾನಂದ .ಯು.ಪಿ ಶಾಲೆಯಲ್ಲಿ ಜಿಲ್ಲಾ ಪಂಚಾಯತು ಕಾಸರಗೋಡು, ಡಯಟ್ ಮಾಯಿಪ್ಪಾಡಿ, ಶಿಕ್ಷಣ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಸಾಕ್ಷರಂ ಕಾರ್ಯಕ್ರಮದ ಅಂಗವಾಗಿ ಮಕ್ಕಳ ದ್ವಿದಿನ ಸಹವಾಸ ಶಿಬಿರ ಉತ್ಥಾನವನ್ನು 08.೦09.14ನೇ ಸೋಮವಾರದಂದು ಎಣ್ಮಕಜೆ ಪಂಚಾಯತಿನ ವಿದ್ಯಾಭ್ಯಾಸ ಸ್ಥಾಯೀ ಸಮಿತಿಯ ಅಧ್ಯಕ್ಷ ಶ್ರೀ ಬಿ.ಎಸ್.ಗಾಂಭೀರರವರು ದೀಪಜ್ವಾಲನೆಯ ಮುಖಾಂತರ ಉದ್ಘಾಟಿಸಿ ಮಕ್ಕಳ ಬಹುಮುಖ ಪ್ರತಿಭೆಗಳಿಗೆ ಪಠ್ಯ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿವೆ. ಹಲವು ಶೈಕ್ಷಣಿಕ ಕಾರ್ಯಕ್ರಮವನ್ನು ಕೇರಳ ಸರಕಾರವು ಮುತುವರ್ಜಿಯಿಂದ ವಹಿಸುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳು ಎಲ್ಲಾ ರೀತಿಯಲ್ಲೂ ವಿದ್ಯಾರ್ಥಿಗಳನ್ನು ಬೆಳೆಯುವಂತೆ ಮಾಡುತ್ತಿರುವುದು ಸಂತಸದ ವಿಷಯ ಎಂದರು. ಅಧ್ಯಕ್ಷ ಸ್ಥಾನ ವಹಿಸಿದ  ವಾರ್ಡ್ ಸದಸ್ಯ ಶ್ರೀ ರವಿ.ಕೆ.ಯವರು ಒಂದು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ರಕ್ಷಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆ ಒಟ್ಟಾಗಿ ದುಡಿದರೆ ಮಕ್ಕಳ ಭವಿಷ್ಯವನ್ನು ರೂಪಿಸಲು ಸಾಧ್ಯ ಎಂದರು. ಪಿ.ಟಿ.. ಅಧ್ಯಕ್ಷ ಶ್ರೀ ಲಕ್ಷ್ಮೀ ಪ್ರಿಯ ಸರಳಾಯರು ಪ್ರತಿಯೊಬ್ಬನಿಗೂ ಪ್ರತಿಭೆಯಿದೆ. ಅದನ್ನು ಹೊರಗೆಡಹಲು ಅವಕಾಶ ಕಲ್ಪಿಸಿಕೊಡುವುದು ಹೆತ್ತವರ, ಶಿಕ್ಷಕರ ಶಾಲೆಯ ಕೆಲಸ ನುಡಿದರು. ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ರವರು ದೌರ್ಬಲ್ಯಗಳನ್ನು ಸವಾಲನ್ನಾಗಿ ಸ್ವೀಕರಿಸಿದಾಗ ಯಾವುದು ಕಷ್ಟವಲ್ಲಎಂದು ತಿಳಿಸಿದರು.ಶಾಲಾ ಮುಖ್ಯ ಗುರುಗಳಾದ ಶ್ರೀ ಪಿ.ಶಿವರಾಂ ಭಟ್ ಸ್ವಾಗತಿಸಿ, ಸಂಸ್ಕೃತ ಶಿಕ್ಷಕ ಶ್ರೀ ಕೆ.ಶಿವರಾಮ್ ಭಟ್ ವಂದಿಸಿದರು. ಕುಮಾರಿಯರಾದ ಕವಿತಾಲಕ್ಷ್ಮೀ ಎನ್.ಎಲ್ ಹಾಗೂ ಮಧುರಾ.ವೈ ಪ್ರಾರ್ಥಿಸಿ, ಶಿಕ್ಷಕ ಶ್ರೀ ಸಚ್ಚಿದಾನಂದ.ಎಸ್ ಕಾರ್ಯಕ್ರಮ ನಿರೂಪಿಸಿದರು.






ಸಂಭ್ರಮದ ಓಣಂ ಆಚರಣೆ
ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ ಕೇರಳದ ನಾಡ ಹಬ್ಬ ಓಣಂನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರತಿ ತರಗತಿಯಲ್ಲಿ ಮಕ್ಕಳು ಹೂವಿನಿಂದ ಆಕರ್ಷಕ ರಂಗೋಲಿಯನ್ನು ಬಿಡಿಸಿ ಮಹಾಬಲಿಗೆ ಭವ್ಯ ಸ್ವಾಗತವನ್ನು ಕೋರಿದರು. ಬಳಿಕ ಓಣಂ ಹಬ್ಬಕ್ಕೆ ವಿಶೇಷ ಕಳೆ ನೀಡುವ’ಓಣ ಸದ್ಯ’ ದಲ್ಲಿ  ಅನ್ನ, ಸಾರು, ಸಾಂಬಾರು, ಪಲ್ಯ, ಚಟ್ನಿ, ಹಪ್ಪಳ, ಪಾಯಸ, ಕ್ಷೀರ, ಇತ್ಯಾದಿ 20 ಬಗೆಯ ನಾನಾ ಖಾದ್ಯಗಳನ್ನೊಳಗೊಂಡ ಭೂರಿ ಭೋಜನ ನಡೆಯಿತು. ರಕ್ಷಕರ / ಹೆತ್ತವರ ಕೊಡುಗೆಯಿಂದಾಗಿ ಈ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು. 
 


 






Friday, September 5, 2014


                                        ಶಿಕ್ಷಕ ದಿನಾಚರಣೆ
ಸ್ವರ್ಗ ಸ್ವಾಮಿ ವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿಶಿಕ್ಷಕ ದಿನಾಚರಣೆಯ ಅಂಗವಾಗಿ ಶಾಲಾ ಎಸೆಂಬ್ಲಿಯಲ್ಲಿ ಸಮಾಜ ವಿಜ್ಞಾನ ಕ್ಲಬಿನ ವತಿಯಿಂದ ಡಾ.ರಾಧಾಕೃಷ್ಣನವರ ವ್ಯಕ್ತಿ ಪರಿಚಯವನ್ನು ಮಂಡಿಸಲಾಯಿತು. ಶಾಲಾ ಪರಿಸರದ ನಿವೃತ್ತ ಶಿಕ್ಷಕರಾದ ಶಿರಂತಡ್ಕ ಸುಬ್ರಹ್ಮಣ್ಯ ಭಟ್ (ನಿವೃತ್ತ ಪಾಂಶುಪಾಲ ಸೀನಿಯರ್ ಕಾಲೇಜ್ ವಿಟ್ಲ) ಹಾಗೂ ಕೃಷ್ಣ ಭಟ್ ಕುಂಚಿನಡ್ಕ (ನಿವೃತ್ತ ಮುಖ್ಯೋಪಾಧ್ಯಾಯ (ಬಿ.ಎ.ಯು.ಪಿ.ಎಸ್.ಕಾಟುಕುಕ್ಕೆ) ಇವರ ಸ್ವಗೃಹಕ್ಕೆ ತೆರಳಿ ಶಾಲು ಹೊದಿಸಿ, ಫಲ ಪುಷ್ಪ, ತಾಂಬೂಲ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಾಪನ ವೃತ್ತಿ ಎನ್ನುವುದು ಕೆಲಸವಲ್ಲ, ಧರ್ಮ ಎಂದು ಶಿರಂತಡ್ಕ ಸುಬ್ರಹ್ಮಣ್ಯ ಭಟ್‌ರವರು ತಿಳಿಸಿದರು. ಗುರು ವಿನ ಮಹತ್ವವನ್ನು ಕುಂಚಿನಡ್ಕ ಕೃಷ್ಣ ಭಟ್‌ರು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ಪಿ.ಶಿವರಾಮ ಭಟ್, ಪಿ.ಟಿ.ಎ. ಅಧ್ಯಕ್ಷ ಲಕ್ಷ್ಮೀಪ್ರಿಯ ಸರಳಾಯ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್, ಶಾಲಾ ನಿವೃತ್ತ ಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್, ಮಕ್ಕಳು ಹಾಗೂ ಸಹ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಶಾಲಾ ಪ್ರತಿನಿಧಿಗಳಾಗಿ ಪಾಲ್ಗೊಂಡರು.
ಬಳಿಕ ಪ್ರಧಾನ ಮಂತ್ರಿ ಹಾಗೂ ಮಕ್ಕಳೊಂದಿಗೆ ನಡೆದ ಟೆಲಿಕಾನ್ಫರೆನ್ಸ್‌ನ್ನು ಎಲ್.ಸಿ.ಡಿ ಮುಖಾಂತರ ಮಕ್ಕಳಿಗೆ ಪ್ರದರ್ಶಿಸಲಾಯಿತು. ಅದನ್ನು ಹಿಂದಿ ಶಿಕ್ಷಕ ಮಿಥುನ್ ವಿ.ಆರ್.ರವರು ಮಕ್ಕಳಿಗೆ ಕನ್ನಡಕ್ಕೆ ಅನುವಾದ ಮಾಡಿಕೊಟ್ಟರು.