Monday, December 17, 2012


 ಶಾರದಾ ಪೂಜೆ
ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿವಿಜಯದಶಮಿ ಆಚರಣೆ ಜರಗಿತು. ನವರಾತ್ರಿ ಕೊನೆದಿನ ವಿದ್ಯೆಯ ಅಧಿ ದೇವತೆ ಸರಸ್ವತಿ ಪೂಜೆಯನ್ನು ಪುರೋಹಿತ ಶರತ್ ಕುಮಾರ್ ಪೆರ್ಲ ನೆರವೇರಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಂದ ಸಾಮೂಹಿಕ ಭಜನೆ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಕೆ.ವೈ.ಸುಬ್ರಹ್ಮಣ್ಯ ಭಟ್‌ರವರು ನವರಾತ್ರಿ ದಿನದ   ವೈಶಿಷ್ಟ್ಯವನ್ನು ಮಕ್ಕಳಿಗೆ ತಿಳಿಸಿದರು. ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರು ಆಗಮಿಸಿದರು. ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಲಾಯಿತು. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

                                                                           


ನವರಾತ್ರಿ ದಿನಗಳಲ್ಲಿ ಮನೆ ಮನೆಗೆ ಆಗಮಿಸುವ ಸಿಂಹ ವೇಷದ ಒಂದು ಪ್ರಾತ್ಯಕ್ಷಿಕೆ ನಮ್ಮ ಶಾಲೆಯಲ್ಲಿ



ಉಪಜಿಲ್ಲಾ ಮಟ್ಟದ ಐ.ಟಿ ಮೇಳದಲ್ಲಿ ಐ.ಟಿ ಕ್ವಿಜ್ ನಲ್ಲಿ ಪ್ರಥಮ ಸ್ಥಾನಗಳಿಸಿದ ಕುಮಾರಿ ಶ್ವೇತಾ.ಬಿ 6ನೇ ತರಗತಿ  ವಿದ್ಯಾರ್ಥಿನಿ.







ಉಪಜಿಲ್ಲಾ ಮಟ್ಟದ ಯು.ಪಿ ವಿಭಾಗದ ವಿಜ್ಞಾನ
ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಗಳಿಸಿದ 7ನೇ ತರಗತಿ ವಿದ್ಯಾರ್ಥಿ ಸುಬ್ರಹ್ಮಣ್ಯ.ಎನ್
ಶಾಲಾ ಮಟ್ಟದ ಕಲೋತ್ಸವ
                 ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿ ದಿನಾಂಕ.19.10.2012 ರಂದು ಶಾಲಾ ಮಟ್ಟದ ಕಲೋತ್ಸವ ಜರಗಿತು. ಮುಖ್ಯೋಪಾಧ್ಯಾಯರಾದ ಶ್ರೀ.ಕೆ.ವೈ.ಸುಬ್ರಹ್ಮಣ್ಯ ಭಟ್ ರವರು ಔಪಚಾರಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಂಸ್ಕೃತಿಕ ಚಟುವಟಿಕೆಗಳ ಸಂಚಾಲಕರಾದ ಸಚ್ಚಿದಾನಂದ.ಎಸ್. ಕಾರ್ಯಕ್ರಮದ ನೇತೃತ್ವವಹಿಸಿದರು. ಎಲ್.ಪಿ,ಯು.ಪಿ ವಿಭಾಗಗಳಿಗೆ ಲಘು ಸಂಗೀತ,ಕಂಠಪಾಠ,ಶಾಸ್ತ್ರೀಯ ಸಂಗೀತ, ಭಾಷಣ, ಸಮೂಹಗಾನ, ದೇಶಭಕ್ತಿಗಾನ, ಪೆನ್ಸಿಲ್ ಡ್ರಾಯಿಂಗ್, ವಾಟರ್ ಕಲರ್, ಕವಿತಾ ರಚನೆ, ಕಥಾ ರಚನೆ ಇತ್ಯಾದಿ ಜನರಲ್ ವಿಭಾಗದ ಸ್ಪರ್ಧೆಯ ಜೊತೆಗೆ ಸಂಸ್ಕೃತೋತ್ಸವದ ಸ್ಪರ್ಧೆಗಳನ್ನು ನಡೆಸಲಾಯಿತು. ತಮ್ಮ ಪ್ರತಿಭೆಯನ್ನು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸಿದವರನ್ನು ಉಪಜಿಲ್ಲಾ ಮಟ್ಟದ ಕಲೋತ್ಸವಕ್ಕೆ ಆಯ್ಕೆ ಮಾಡಲಾಯಿತು.
 



ಉಪಜಿಲ್ಲಾ ಮಟ್ಟದ ವಿದ್ಯಾರಂಗ ಕಲೋತ್ಸವ
          
    ಇಚ್ಲಂಪಾಡಿ ಎ.ಯು.ಪಿ.ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾಮಟ್ಟದ ವಿದ್ಯಾರಂಗಂಕಲಾ ಸಾಹಿತ್ಯೋತ್ಸವ ಸರ್ಗಂ - 2012 ದಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಪ್ರಕಟಿಸಿ ಬಹುಮಾನ ವಿಜೇತರಾದ ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯ ವಿದ್ಯಾರ್ಥಿಗಳು - ಶಾಲಾ ಮುಖ್ಯೋಪಾಧ್ಯಾಯ ಶ್ರೀ ಕೆ.ವೈ. ಸುಬ್ರಹ್ಮಣ್ಯ ಭಟ್ ಮತ್ತು ವಿದ್ಯಾರಂಗಂ ಶಾಲಾ ಕನ್ವೀನರ್ ಪದ್ಮನಾಭ ಆರ್. ಅವರೊಂದಿಗೆ.



ಸ್ವರ್ಗಕ್ಕೆ ಮರಳಿ ಆಗಮಿಸಿದ ಮಹಾಬಲಿ
 
     ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ  ಬಣ್ಣದ ಪೂವಲಿ ಎಂಬ1ನೇ ತರಗತಿಯ ಪಠ್ಯ ಚಟುವಟಿಕೆಗೆ ಪೂರಕವಾಗಿ ಶಿಕ್ಷಕಿ ಗೀತಾ ಕುಮಾರಿ ಯವರ ನೇತೃತ್ವದಲ್ಲಿ ಶಾಲಾ ಪರಿಸರದಿಂದ ಹೂಗಳನ್ನು ಸಂಗ್ರಹಿಸಿ ರಂಗೋಲಿ ಬಿಡಿಸಿ, ಮಹಾಬಲಿಗೆ ಸ್ವಾಗತ ಕೋರಿದರು.


ಸಲಾಡ್ ತಯಾರಿ

    ಕೈಯಲ್ಲಿ ಸ್ಲೇಟು-ಬಳಪ, ಪುಸ್ತಕ ಹಿಡಿಯ ಬೇಕಾದ ಕೈಯಲ್ಲಿ ಚೂರಿ, ತರಕಾರಿ ನೀಡಿದಾಗ ಊಟಕ್ಕೆ ಬೇಕಾದ ರುಚಿಕರ ಸಲಾಡ್ ರೆಡಿ. ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯ ೨ನೇ ತರಗತಿಯ ಮಕ್ಕಳು ಆಹಾರವೇ ಅಧಾರ ಎಂಬ ಪಠ್ಯ ಚಟುವಟಿಕೆಗೆ ಪೂರಕವಾಗಿ ಶಿಕ್ಷಕಿಗೀತಾಂಜಲಿ ಯವರ ಮಾರ್ಗದರ್ಶನದಲ್ಲಿ ಸಲಾಡ್ ತಯಾರಿಸಿದರು.
 





        ಶಿಕ್ಷಾ ಕಾ ಹಕ್ ಅಭಿಯಾನ್ ತಂಡ ಸ್ವರ್ಗ ದಲ್ಲಿ-
ಸರ್ವ ಶಿಕ್ಷಾ ಅಭಿಯಾನ್ ಹಾಗೂ ಡಯಟ್ ನೇತೃತ್ವದ ತಂಡವೊಂದು ಸ್ಥಳೀಯ ಸ್ವರ್ಗ ಸ್ವಾಮೀ ವಿವೇಕಾನಂದ ಶಾಲೆಗೆ ಭೇಟಿಯಿತ್ತು ಶಾಲೆಯ ಒಟ್ಟು ವ್ಯವಸ್ಥೆಯ ಪರಿಶೀಲನೆ ನಡೆಸಿತು. ಮಕ್ಕಳಿಗೆ ಕೊಡಮಾಡುವ ಮಧ್ಯಾಹ್ನ ಊಟ, ಮಕ್ಕಳೇ ನಿಯಂತ್ರಿಸುತ್ತಿರುವ ಮೂತ್ರಾಲಯ- ಶೌಚಾಲಯಗಳು,ಅಚ್ಚುಕಟ್ಟಾದ ಶಾಲಾ ಗ್ರಂಥಾಲಯ, ತರಗತಿಗಳು, ಓದು ಮೂಲೆ, ಶುಚಿಯಾದ ಶಾಲಾ ವಠಾರ, ಕಂಪ್ಯೂಟರ್ ಲ್ಯಾಬ್ ಇವೇ ಮೊದಲಾದ ಪ್ರಧಾನ ವಿಷಯಗಳು ತಂಡದ ಮೆಚ್ಚುಗೆಗೆ ಪಾತ್ರವಾಯಿತು.

ಬಳಿಕ ನಡೆದ ರಕ್ಷಕ - ಶಿಕ್ಷಕ ಸಂಘದ ಕಾರ್ಯಕಾರೀ ಸಮಿತಿಯಲ್ಲಿ ಪರಿಶೀಲನಾ ತಂಡದ ನೇತೃತ್ವ ವಹಿಸಿದ್ದ ಬಿ.ಆರ್.ಸಿ. ಟ್ರೈನರ್ ಸತೀಶನ್ ಕೆ.ವಿ. ಮಾತನಾಡಿ ಸುತ್ತು ಮುತ್ತಲ ಶಾಲೆಗಳಿಗೆ ಎಲಾ ವಿಧದಲ್ಲೂ ಮಾದರಿ ಯಾಗಿರುವ ಈ ಶಾಲೆಗೆ ಬೆಸ್ಟ್ ಪಿ.ಟಿ.ಎ ಅವಾರ್ಡ್ ಸಿಕ್ಕಿದುದರಲ್ಲಿ ಯಾವುದೇ ಅತಿಶಯವಿಲ್ಲ.ಇದು ಶಾಲೆಯ ಒಟ್ಟು ವ್ಯವಸ್ಥೆಗೆ, ಹಿರಿಮೆಗೆ ಸಂದ ಗೌರವ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದ ಬಿ.ಕೆ ಯವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಾರ್ಡ್ ಮೆಂಬರ್ ರವಿ.ಕೆ, ಮಾತೃ ಸಂಗಮದ ಅಧ್ಯಕ್ಷೆ ಶ್ರೀಮತಿ ರಾಧಿಕಾ ಶ್ರೀನಿವಾಸ್ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರೂ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಕೆ.ವೈ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕದೊಂದಿಗೆ ಸ್ವಾಗತ ಕೋರಿದರು.ಶಾಲಾ ಹೆಲ್ಪ್ ಡೆಸ್ಕ್ನ ಶ್ರೀಮತಿ ಬಿ.ಗೀತಾ ಕುಮಾರಿ ವಂದಿಸಿದರು.ಕುಮಾರಿ ಅಶ್ವಿನಿ.ಯಂ ಹಾಗೂ ಬಿ.ಆರ್.ಸಿ. ಟ್ರೈನರ್ ಅಶ್ವತಿ ಅಜಕಪ್ಪ ತಂಡದ ಸದಸ್ಯರಾಗಿ ಸಹಕರಿಸಿದರು.
ವನ್ಯಜೀವಿ ವಾರಾಚರಣೆ.

       ಸ್ವರ್ಗ ಸ್ವಾಮೀ ವಿವೇಕಾನಂದ ಶಾಲೆಯಲ್ಲಿ ವನ್ಯಜೀವಿ ವಾರಾಚರಣೆಯ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಮಿಸ್ಟರ್ ಹೆಬ್ಬಾವು. ಶಾಲಾ ಮೇನೇಜರ್ ಹೃಷಿಕೇಶ ಅವರ ಅಡಿಕೆ ತೋಟದಲ್ಲಿ ಕಂಡು ಬಂದ ಹೆಬ್ಬಾವನ್ನು ವಿಷ್ಣು ಪ್ರಸಾದ್ ಕೆದಂಬಾಯಿಮೂಲೆ ಮತ್ತು ಕೃಷ್ಣಮೋಹನ ಪೊಸೊಳ್ಯ ಶಾಲಾ ಮಕ್ಕಳಿಗೆ ಪರಿಚಯಿಸಿದರು. ೭ನೇ ತರಗತಿಯ ಪಠ್ಯ ಚಟುವಟಿಕೆಗೆ ಪೂರಕವಾಗಿ ತಯಾರಿಸಿದ ಕೊಲೇಷ್‌ನ್ನು ಬಾಲೋದ್ಯಾನದಲ್ಲಿ ಬಿತ್ತರಿಸಲಾಯಿತು.

                 ವೃತ್ತಿ ಪರಿಚಯ ಮೇಳ

ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ ಇತ್ತೀಚೆಗೆ ನಡೆದ ವೃತ್ತಿಪರಿಚಯ ಮೇಳದಲ್ಲಿ ಮಕ್ಕಳು ತಮ್ಮ ಕೈಚಳಕವನ್ನು ಪ್ರದರ್ಶಿಸುತ್ತಿರುವುದು.















ಗಾಂಧೀ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ

                 ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿ ಯವರ ಜನ್ಮ ದಿನವನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀ ಕೆ.ವೈ. ಸುಬ್ರಹ್ಮಣ್ಯ ಭಟ್ ರವರು ಈ ಮಹಾನ್ ವ್ಯಕ್ತಿಗಳ ಭಾವ ಚಿತ್ರಕ್ಕೆ ಪುಷ್ಪಹಾರವನ್ನು ಸಮರ್ಪಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ '' ಮಹಾತ್ಮ ಗಾಂಧಿ ಜೀವನವೇ ನಮಗೆ ಸಂದೇಶ'' ಎಂದು ಹಿತವಚನವಿತ್ತರು. ಕುಮಾರಿ ವೇದದೀಕ್ಷಾ ಹಾಗೂ ಅಕ್ಷತಾ ರವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜೀವನ ಚರಿತ್ರೆಯನ್ನು ಮಂಡಿಸಿದರು. ಸೇವನಾ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳು - ಅಧ್ಯಾಪಕರು ಗುಂಪುಗಳಲ್ಲಿ ಶಾಲಾ ಪರಿಸರವನ್ನು ಶುಚಿಗೊಳಿಸಿದರು.




Thursday, December 13, 2012


ಮಾ-ಬೇಠಿ ಸಮ್ಮೀಲನ್
     ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿ ಸಿ.ಆರ್.ಸಿ. ಮಟ್ಟದ ಮಾ-ಬೇಟೀ ಸಮ್ಮಿಲನ್ ಎಂಬ ವಿಶಿಷ್ಟ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆಯಲ್ಲಾಗುವ ಬದಲಾವಣೆ, ಈ ಹಂತದಲ್ಲಿ ಕಾಡುವ ಸಮಸ್ಯೆಗಳು, ಆಧುನಿಕ ವಸ್ತ್ರ ವಿನ್ಯಾಸದ ಉಡುಗೆ-ತೊಡುಗೆ, ತಾಯಿ ಮಗುವಿನ ಬಾಂಧವ್ಯಗಳ    ಕುರಿತಾಗಿ ಮುಕ್ತವಾಗಿ ಚರ್ಚಿಸಲಾಯಿತು. ಪ್ರಚಲಿತ ಸಮಾಜದಲ್ಲಿ ಕಂಡು ಬರುವ ಸಾಮಾಜಿಕ ಸಮಸ್ಯೆಗಳಾದ ಮೊಬೈಲ್ ಅವಾಂತರ, ಮನೆಯ ಹಿರಿಯರಿಂದ ಲಭಿಸಬೇಕಾದ ಪ್ರೀತಿ, ವಾತ್ಸಲ್ಯದ ಕೊರತೆಯಿಂದಾಗುವ ಅನಾಹುತಗಳನ್ನು ವಿಡಿಯೋ ಕ್ಲಿಪ್‌ನ ಮೂಲಕ ಪ್ರದರ್ಶಿಸಿ ಚರ್ಚಿಸಲಾಯಿತು.
             

 ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಹಾಗೂ ನೆರೆಯ ವಾಣೀನಗರ ಪ್ರೌಢ ಶಾಲೆಯ ಒಟ್ಟು62 ಮಂದಿ ಭಾಗವಹಿಸಿದರು. ಬಿ.ಆರ್.ಸಿ. ತರಬೇತುದಾರರಾದ ಶ್ರೀ ಲಕ್ಷ್ಮೀಪ್ರಿಯ ಸರಳಾಯ ಹಾಗು ಶ್ರೀಮತಿ ಜಯಶ್ರೀ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ ರವರ ಅಧ್ಯಕ್ಷತೆಯಲ್ಲಿ, ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದ ಬಿ.ಕೆ.ಯವರು ಔಪಚಾರಿಕವಾಗಿ ಉದ್ಘಾಟಿಸಿದರು. ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ವಂದಿಸಿದರು.                

Wednesday, December 12, 2012


 

     
   ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಸ್ವರ್ಗ ಸ್ವಾಮೀ ವಿವೇಕಾನಂದ ಶಾಲೆಯು ಸಾಮಾಜಿಕ ಕಳಕಳಿಯಿಂದ ಆಯೋಜಿಸಿದ ‘ಆಧಾರ ಕಾರ್ಡ್’ ನೋಂದಣಿ ಗಾಗಿ ತಮ್ಮ ಸರದಿಯಲ್ಲಿ ಕಾದು ಕುಳಿತ ಜನಸಂದೋಹ. ಶಾಲಾ ಮುಖ್ಯೋಪಾಧ್ಯಾಯರ ಕೇಳಿಕೆಯಂತೆ ಪಂಚಾಯತು ಅಧ್ಯಕ್ಷರು ಶಾಲೆಯಲ್ಲಿ 2 ದಿನ ‘ಭಾವಚಿತ್ರ’ ತೆಗೆಯುವ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು. ಸ್ಥಳೀಯ ‘ಮಾತೃ ಭೂಮಿ’ ಪದಾಧಿಕಾರಿಗಳು ಇದನ್ನು ವ್ಯವಸ್ಥಿತವಾಗಿ ನಡೆಸುವಲ್ಲಿ ಸಹಕರಿಸಿದರು.

                  ‘ಸ್ವರ್ಗ’ದಲ್ಲಿ ಯಕ್ಷಗಾನ ಹಿಮ್ಮೇಳ ಪ್ರಾತ್ಯಕ್ಷಿಕೆ-
                     ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ ಯಕ್ಷಗಾನ ಹಿಮ್ಮೇಳನದ ಪ್ರಾತ್ಯಕ್ಷಿಕೆ ನಡೆಯಿತು. 4ನೇ ತರಗತಿಯ  ಕಲಿಕಾ ಚಟುವಟಿಕೆಯ ಭಾಗವಾಗಿ   ಪಂಚವಟಿ ಪ್ರಸಂಗದ ಆಯ್ದ ಪದ್ಯಗಳನ್ನು ನವರಸ ಭರಿತವಾಗಿ ಖ್ಯಾತ ಭಾಗವತ  ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವರು ಹಾಡಿ ಎಲ್ಲರ ಮನರಂಜಿಸಿದರು. ಯಕ್ಷಗಾನ ಮೇಳದ ಕಲಾವಿದ ನಮ್ಮ ಶಾಲಾ ಹಳೆ ವಿದ್ಯಾರ್ಥಿ ಪಡ್ರೆ ಶ್ರೀಧರ ರವರು ಚೆಂಡೆ ಹಾಗೂ ಪಿಟಿಎ ಅಧ್ಯಕ್ಷ ಶ್ರೀ ವಿವೇಕಾನಂದ.ಬಿಕೆ. ಯವರು ಮೃದಂಗ ವಾದನದಲ್ಲಿ ಸಹಕರಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಯಕ್ಷಗಾನ ಕಲಾವಿದರೊಂದಿಗೆ ೪ನೇ ತರಗತಿಯ ಮಕ್ಕಳು ಪಠ್ಯಚಟುವಟಿಕೆಗೆ ಪೂರಕವಾಗಿ ಸಂದರ್ಶನ ನಡೆಸಿದರು. ಈ ಪ್ರಾತ್ಯಕ್ಷಿಕೆಯ ನೇತೃತ್ವವನ್ನು ಕೊಲ್ಲೆಂಕಾನ ಅವಿನಾಶ್ ಶಾಸ್ತ್ರಿಯವರು ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀ ಕೆ.ವೈ. ಸುಬ್ರಹ್ಮಣ್ಯ ಭಟ್ ರವರು ಸ್ವಾಗತಿಸಿದರು. ಅತಿಥಿ ಕಲಾವಿದರಿಗೆ ಪಿ.ಟಿ.ಎ. ಅಧ್ಯಕ್ಷರು ಸ್ಮರಣಿಕೆಯನ್ನಿತ್ತು ಗೌರವಿಸಿದರು. ಶಿಕ್ಷಕ ಸಚ್ಚಿದಾನಂದ.ಎಸ್. ರವರು ಕಾರ್ಯಕ್ರಮವನ್ನು ನಿರೂಪಿಸಿದರು. 
 





 

          
ಸ್ವರ್ಗ  ಶಾಲೆಗೆ  ಉಪಜಿಲ್ಲಾ  ಉತ್ತಮ  ರಕ್ಷಕ - ಶಿಕ್ಷಕ  ಸಮಿತಿ  ಪ್ರಶಸ್ತಿ 



 ಪತ್ರಿಕಾ ತುಣುಕಿನ ಮಾಹಿತಿ 


‘ಎಂಡೋಸಲ್ಫಾನ್’ ದುರಂತದಿಂದಾಗಿ ಜಾಗತಿಕ ಭೂಪಟದಲ್ಲಿ ಸ್ಥಾನ ಪಡೆದ ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದ ಹೃದಯ ಭಾಗ ‘ಸ್ವರ್ಗ’.ವಿದ್ಯಾಭ್ಯಾಸದಿಂದ ದೂರವೇ ಉಳಿದಿರುವ ಕೃಷಿ ಕೂಲಿಕಾರ್ಮಿಕರ,ಪರಿಶಿಷ್ಟ ಜಾತಿ,ವರ್ಗಗಳ, ಬಡತನ ರೇಖೆಯಲ್ಲೇ ಗುರುತಿಸಿಕೊಂಡಿರುವ ಕುಟುಂಬಗಳೇ ಹೆಚ್ಚಿರುವ ಈ ಪ್ರದೇಶದಲ್ಲಿ ಎಳೆಯವರಿಗೆ ಆಶಾಕಿರಣವಾಗಿ ಅವರ ಭವಿಷ್ಯಕ್ಕೊಂದು ಮುನ್ನುಡಿ ಬರೆಯುವ ಕಾಯಕದಲ್ಲಿ ಸದ್ದಿಲ್ಲದೆ ದುಡಿಯುತ್ತಿರುವ ಸಂಸ್ಥೆ‘ಸ್ವರ್ಗ ಸ್ವಾಮೀ ವಿವೇಕಾನಂದ ಶಾಲೆ’. ಶಾಲೆಯ ಭೌತಿಕ ಅಗತ್ಯಗಳನ್ನು ಪೂರೈಸುತ್ತಾ ಹಲವು ‘ಇಲ್ಲ’ಗಳನ್ನು ಇಲ್ಲವಾಗಿಸಿಕೊಂಡು ‘ಇತಿಮಿತಿ’ಗಳೊಳಗೆ ಕೆಲವು ವಿಶಿಷ್ಟ ಚಟುವಟಿಕೆಗಳನ್ನು ನಡೆಸಿಕೊಂಡು ಹಲವರ ಗಮನ ಸೆಳೆದಿರುವುದು ಅತಿಶಯೋಕ್ತಿಯಲ್ಲ.ಆಸಕ್ತಿಯ ಕೊರತೆಯಿಂದ‘ಕಲಿಕೆ’ಯಲ್ಲಿ ತೀರಾ ಹಿಂದುಳಿದ ಮಕ್ಕಳನ್ನು ವಿಶೇಷವಾಗಿ ಗಮನಿಸುತ್ತಾ ‘ಮುಖ್ಯ ವಾಹಿನಿ’ಯಲ್ಲಿ ಆ ಮಕ್ಕಳು ಸೇರಿಕೊಳ್ಳುವಂತೆ ತರಗತಿಗಳನ್ನು ನಡೆಸುವುದರೊಂದಿಗೆ ಪಠ್ಯೇತರ ಚಟುವಟಿಕೆಗಳನ್ನೂ ನಿರಂತರ ನಡೆಸಿಕೊಂಡು ಬರುತ್ತಿರುವುದು ಈ ಸಂಸ್ಥೆಯ ಹೆಚ್ಚುಗಾರಿಕೆ.
ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಪ್ರಕಟಣೆಗೆ ವೇದಿಕೆಯಾಗಿ ಮಕ್ಕಳಿಂದಲೇ ನಿರ್ವಹಿಸಲ್ಪಡುವ ಶಾಲಾ ರೇಡಿಯೋಕೇಂದ್ರ,ಬರವಣಿಗೆಯ ಹಲವು ಮಜಲುಗಳಿಗೆ ಸಾಕ್ಷಿಕೇಂದ್ರವಾಗಿ ಬಾಲೋದ್ಯಾನ, ನಿರಂತರ ಓದಿಗಾಗಿ ದೈನಿಕ, ಸಾಪ್ತಾಹಿಕ,ಮಾಸಿಕ,ತ್ರೈಮಾಸಿಕಗಳು ೪೫೦೦ ವ್ಯತ್ಯಸ್ತ ಸಾಹಿತ್ಯಿಕ ಪುಸ್ತಕಗಳ ಗ್ರಂಥ ಭಂಡಾರ,ಆರೋಗ್ಯ ಮತ್ತು ಪರಿಸರ ಸ್ವಾಸ್ಥ್ಯಕ್ಕೆ ಪುಷ್ಷ್ಟಿ ನೀಡುವ ಮೂತ್ರಾಲಯ ಶೌಚಾಲಯಗಳು, ಹೆಣ್ಣು ಮಕ್ಕಳ ಶಿಕ್ಷಣ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇವು ಒಳಾಂಗಣ ಚಟುವಟಿಕೆಗಳಾಗಿ ಗಮನ ಸೆಳೆಯುತ್ತವೆ.
ಕೃಷಿ ಕ್ಷೇತ್ರವಾಗಿದ್ದೂ ಪರಿಸರದಲ್ಲಿ ಕೃಷಿ ವಿಮುಖತೆಯನ್ನು ಗಮಣಿಸಿ ಮಕ್ಕಳಲ್ಲಿ ಆ ಮೂಲಕ ಹಿರಿಯರಲ್ಲೂ ಕೃಷಿ ಪ್ರಜ್ಞೆಯನ್ನು ಮೂಡಿಸಲು ಸಮೀಪದ ‘ಹಡಿಲು’ ಗದ್ದೆಯಲ್ಲಿ ನಡೆಸಿದ ‘ಕೆಸರು ಗದ್ದೆಯಲ್ಲೊಂದೊ ದಿನ’ ಹಾಗೂ ವಿದ್ಯಾರ್ಥಿಗಳೂ ಅಧ್ಯಾಪಕರೂ, ರಕ್ಷಕರೂ ಸೇರಿ ನಡೆಸಿದ ಭತ್ತ ಬೇಸಾಯ (ನೇಜಿ ನೆಡುವುದು, ಪೈರು ಕೊಯ್ಯುವುದು, ಭತ್ತ ಬೇರ್ಪಡಿಸುವುದು) ಪರಿಸರದ ಅಧ್ಯನಕ್ಕಾಗಿ ‘ಕಾಡಿನಲ್ಲೊಂದು ತುತ್ತು‘ನೀರಲ್ಲೊಂದು ಹೊತ್ತು’ ವಿಶಿಷ್ಟ ಕಾರ್ಯಕ್ರಮ, ಉತ್ತಮ ಕೃಷಿಕರೊಂದಿಗೆ ಸಂವಾದ, ದಿನ ಮಹತ್ವಕ್ಕೆ ಅನುಗುಣವಾಗಿ ಪೂರಕವಾಗಿ ನಡೆಸುವ ಹೊರಾಂಗಣ ಚಟುವಟಿಕೆಗಳು, ಮಕ್ಕಳೇ ನೆಟ್ಟು ಬೆಳೆಸಿದ ತರಕಾರಿ, ಬಾಳೆತೋಟ, ಪಡೆದ ಸಮೃದ್ಧ ತರಕಾರಿ -ಹೀಗೆ ಹತ್ತು ಹಲವು ಚಟುವಟಿಕೆಗಳ ಮೂಲಕ ಶಾಲೆಯು ‘ನಿತ್ಯೋತ್ಸವ’ ತಾಣವಾಗಿದೆ.ಶಾಲೆಯು ‘ಮಕ್ಕಳಿಗಾಗಿ - ಅಧ್ಯಾಪಕರಿಗಾಗಿ’ ಮಾತ್ರವಲ್ಲ ‘ಶಾಲೆ - ಸಮಾಜಕ್ಕಾಗಿ’ ಎಂಬ ಸಂದೇಶ ಶಾಲೆಯು ನಡೆಸಿದ, ನಡೆಸುತ್ತಿರುವ ಈ ಕೆಳಗಿನ ಚಟುವಟಿಕೆಗಳ ಮೂಲಕ ರವಾನೆಯಾಗಿರುವುದು ಸುಳ್ಳಲ್ಲ. ಎಸ್.ಎಸ್.ಎಲ್.ಸಿ, ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಮುಂದೆ ಹೇಗೆ? ಏನು? - ಭವಿಷ್ಯಕ್ಕೆ ಮಾರ್ಗದರ್ಶನ, ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಪರೀಕ್ಷೆಗಳನ್ನು ಎದುರಿಸುವುದು ಹೇಗೆ? ತಜ್ಞರಿಂದ ಮಾದರಿ ತರಗತಿಗಳು -‘ಮಹಿಳಾ ಸಬಲೀಕರಣ’ ಕಮ್ಮಟಗಳು, ‘ಸುಧಾರಿತ ಕೃಷಿ’ ಕೃಷಿ ವಿಜ್ಞಾನಿಗಳೊಂದಿಗೆ ‘ಕೃಷಿಕರ ಸಂವಾದ’ ಪರಿಸರದ ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ, ಗೌರವಿಸುವ ಜವಾಬ್ದಾರಿ, ಮಾಹಿತಿ ಹಕ್ಕು ಕಾಯಿದೆ 2005 ಹಾಗೂ ಜನಪ್ರತಿನಿಧಿಗಳ ವಿಶೇಷ ಕಾರ್ಯಕ್ರಮ, ಬಡತನದ ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಳಿಸುವವರನ್ನು ಗುರುತಿಸಿ ಪ್ರೋತ್ಸಾಹಿಸುವುದು, ಮಕ್ಕಳ ರಕ್ಷಕರ ಪೋಷಕರ ಪ್ರತಿಭೆಗೆ ವೇದಿಕೆಯಾಗಿ ಹೆತ್ತವರ ದಿನಾಚರಣೆ, ಹೀಗೆ ಕ್ರಮಿಸಿದ ದೂರ ಸಣ್ಣದಲ್ಲ.
ಪಂಚಾಯತು ಮಟ್ಟದಲ್ಲಿ ‘ಉತ್ತಮ ಶಾಲೆ’ ಎಂಬ ಅಭಿದಾನ; ಇದೀಗ ಉಪಜಿಲ್ಲಾ ಮಟ್ಟದ ‘ಉತ್ತಮ ಪಿ.ಟಿ.ಎ.’ ಎಂಬ ಪ್ರಶಸ್ತಿ ಗ್ರಾಮೀಣ ಪ್ರದೇಶದ ಈ ಶಾಲೆಯ ಒಟ್ಟು ಔನತ್ಯಕ್ಕೆ ಸಂದ ಗೌರವ. ಅರ್ಪಣಾ ಮನೋಭಾವದ ಶಿಕ್ಷಕ ವೃಂದ- ಸಿಬ್ಬಂದಿ, ಸಕಾಲದಲ್ಲಿ ಸ್ಪಂದಿಸುವ ಶಾಲಾ ವ್ಯವಸ್ಥಾಪಕರು, ರಕ್ಷಕ ಶಿಕ್ಶಕ ಸಂಘ, ಶಾಲೆಯ ಮೇಲೆ ಅಭಿಮಾನವಿರುವ ಊರ ಪರವೂರ ಸ್ನೇಹಿತರು, ಅವರವರ ಸ್ಥಾನಮಾನಗಳಿಗೆ ತಕ್ಕಂತೆ, ಎಲ್ಲರೊಡನೆಯೂ ಬೆರೆತು ಶಾಲಾಭಿವೃದ್ಧಿಯಲ್ಲಿ ಎಲ್ಲರನ್ನೂ ತೊಡಗಿಸಿಕೊಳ್ಳುವಂತೆ ವ್ಯವಹರಿಸುವ ಮುಖ್ಯೋಪಾಧ್ಯಾಯರು - ಈ ಎಲ್ಲಾ ಕಾರಣಗಳಿಂದ ಈ ಶಾಲೆ ಕೇವಲ ‘ಸ್ವರ್ಗ ಶಾಲೆ’ ಆಗಿರದೆ ಮಕ್ಕಳ ‘ಸ್ವರ್ಗ’ವಾಗಿದೆ.