Wednesday, December 12, 2012

          
ಸ್ವರ್ಗ  ಶಾಲೆಗೆ  ಉಪಜಿಲ್ಲಾ  ಉತ್ತಮ  ರಕ್ಷಕ - ಶಿಕ್ಷಕ  ಸಮಿತಿ  ಪ್ರಶಸ್ತಿ 



 ಪತ್ರಿಕಾ ತುಣುಕಿನ ಮಾಹಿತಿ 


‘ಎಂಡೋಸಲ್ಫಾನ್’ ದುರಂತದಿಂದಾಗಿ ಜಾಗತಿಕ ಭೂಪಟದಲ್ಲಿ ಸ್ಥಾನ ಪಡೆದ ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದ ಹೃದಯ ಭಾಗ ‘ಸ್ವರ್ಗ’.ವಿದ್ಯಾಭ್ಯಾಸದಿಂದ ದೂರವೇ ಉಳಿದಿರುವ ಕೃಷಿ ಕೂಲಿಕಾರ್ಮಿಕರ,ಪರಿಶಿಷ್ಟ ಜಾತಿ,ವರ್ಗಗಳ, ಬಡತನ ರೇಖೆಯಲ್ಲೇ ಗುರುತಿಸಿಕೊಂಡಿರುವ ಕುಟುಂಬಗಳೇ ಹೆಚ್ಚಿರುವ ಈ ಪ್ರದೇಶದಲ್ಲಿ ಎಳೆಯವರಿಗೆ ಆಶಾಕಿರಣವಾಗಿ ಅವರ ಭವಿಷ್ಯಕ್ಕೊಂದು ಮುನ್ನುಡಿ ಬರೆಯುವ ಕಾಯಕದಲ್ಲಿ ಸದ್ದಿಲ್ಲದೆ ದುಡಿಯುತ್ತಿರುವ ಸಂಸ್ಥೆ‘ಸ್ವರ್ಗ ಸ್ವಾಮೀ ವಿವೇಕಾನಂದ ಶಾಲೆ’. ಶಾಲೆಯ ಭೌತಿಕ ಅಗತ್ಯಗಳನ್ನು ಪೂರೈಸುತ್ತಾ ಹಲವು ‘ಇಲ್ಲ’ಗಳನ್ನು ಇಲ್ಲವಾಗಿಸಿಕೊಂಡು ‘ಇತಿಮಿತಿ’ಗಳೊಳಗೆ ಕೆಲವು ವಿಶಿಷ್ಟ ಚಟುವಟಿಕೆಗಳನ್ನು ನಡೆಸಿಕೊಂಡು ಹಲವರ ಗಮನ ಸೆಳೆದಿರುವುದು ಅತಿಶಯೋಕ್ತಿಯಲ್ಲ.ಆಸಕ್ತಿಯ ಕೊರತೆಯಿಂದ‘ಕಲಿಕೆ’ಯಲ್ಲಿ ತೀರಾ ಹಿಂದುಳಿದ ಮಕ್ಕಳನ್ನು ವಿಶೇಷವಾಗಿ ಗಮನಿಸುತ್ತಾ ‘ಮುಖ್ಯ ವಾಹಿನಿ’ಯಲ್ಲಿ ಆ ಮಕ್ಕಳು ಸೇರಿಕೊಳ್ಳುವಂತೆ ತರಗತಿಗಳನ್ನು ನಡೆಸುವುದರೊಂದಿಗೆ ಪಠ್ಯೇತರ ಚಟುವಟಿಕೆಗಳನ್ನೂ ನಿರಂತರ ನಡೆಸಿಕೊಂಡು ಬರುತ್ತಿರುವುದು ಈ ಸಂಸ್ಥೆಯ ಹೆಚ್ಚುಗಾರಿಕೆ.
ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಪ್ರಕಟಣೆಗೆ ವೇದಿಕೆಯಾಗಿ ಮಕ್ಕಳಿಂದಲೇ ನಿರ್ವಹಿಸಲ್ಪಡುವ ಶಾಲಾ ರೇಡಿಯೋಕೇಂದ್ರ,ಬರವಣಿಗೆಯ ಹಲವು ಮಜಲುಗಳಿಗೆ ಸಾಕ್ಷಿಕೇಂದ್ರವಾಗಿ ಬಾಲೋದ್ಯಾನ, ನಿರಂತರ ಓದಿಗಾಗಿ ದೈನಿಕ, ಸಾಪ್ತಾಹಿಕ,ಮಾಸಿಕ,ತ್ರೈಮಾಸಿಕಗಳು ೪೫೦೦ ವ್ಯತ್ಯಸ್ತ ಸಾಹಿತ್ಯಿಕ ಪುಸ್ತಕಗಳ ಗ್ರಂಥ ಭಂಡಾರ,ಆರೋಗ್ಯ ಮತ್ತು ಪರಿಸರ ಸ್ವಾಸ್ಥ್ಯಕ್ಕೆ ಪುಷ್ಷ್ಟಿ ನೀಡುವ ಮೂತ್ರಾಲಯ ಶೌಚಾಲಯಗಳು, ಹೆಣ್ಣು ಮಕ್ಕಳ ಶಿಕ್ಷಣ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇವು ಒಳಾಂಗಣ ಚಟುವಟಿಕೆಗಳಾಗಿ ಗಮನ ಸೆಳೆಯುತ್ತವೆ.
ಕೃಷಿ ಕ್ಷೇತ್ರವಾಗಿದ್ದೂ ಪರಿಸರದಲ್ಲಿ ಕೃಷಿ ವಿಮುಖತೆಯನ್ನು ಗಮಣಿಸಿ ಮಕ್ಕಳಲ್ಲಿ ಆ ಮೂಲಕ ಹಿರಿಯರಲ್ಲೂ ಕೃಷಿ ಪ್ರಜ್ಞೆಯನ್ನು ಮೂಡಿಸಲು ಸಮೀಪದ ‘ಹಡಿಲು’ ಗದ್ದೆಯಲ್ಲಿ ನಡೆಸಿದ ‘ಕೆಸರು ಗದ್ದೆಯಲ್ಲೊಂದೊ ದಿನ’ ಹಾಗೂ ವಿದ್ಯಾರ್ಥಿಗಳೂ ಅಧ್ಯಾಪಕರೂ, ರಕ್ಷಕರೂ ಸೇರಿ ನಡೆಸಿದ ಭತ್ತ ಬೇಸಾಯ (ನೇಜಿ ನೆಡುವುದು, ಪೈರು ಕೊಯ್ಯುವುದು, ಭತ್ತ ಬೇರ್ಪಡಿಸುವುದು) ಪರಿಸರದ ಅಧ್ಯನಕ್ಕಾಗಿ ‘ಕಾಡಿನಲ್ಲೊಂದು ತುತ್ತು‘ನೀರಲ್ಲೊಂದು ಹೊತ್ತು’ ವಿಶಿಷ್ಟ ಕಾರ್ಯಕ್ರಮ, ಉತ್ತಮ ಕೃಷಿಕರೊಂದಿಗೆ ಸಂವಾದ, ದಿನ ಮಹತ್ವಕ್ಕೆ ಅನುಗುಣವಾಗಿ ಪೂರಕವಾಗಿ ನಡೆಸುವ ಹೊರಾಂಗಣ ಚಟುವಟಿಕೆಗಳು, ಮಕ್ಕಳೇ ನೆಟ್ಟು ಬೆಳೆಸಿದ ತರಕಾರಿ, ಬಾಳೆತೋಟ, ಪಡೆದ ಸಮೃದ್ಧ ತರಕಾರಿ -ಹೀಗೆ ಹತ್ತು ಹಲವು ಚಟುವಟಿಕೆಗಳ ಮೂಲಕ ಶಾಲೆಯು ‘ನಿತ್ಯೋತ್ಸವ’ ತಾಣವಾಗಿದೆ.ಶಾಲೆಯು ‘ಮಕ್ಕಳಿಗಾಗಿ - ಅಧ್ಯಾಪಕರಿಗಾಗಿ’ ಮಾತ್ರವಲ್ಲ ‘ಶಾಲೆ - ಸಮಾಜಕ್ಕಾಗಿ’ ಎಂಬ ಸಂದೇಶ ಶಾಲೆಯು ನಡೆಸಿದ, ನಡೆಸುತ್ತಿರುವ ಈ ಕೆಳಗಿನ ಚಟುವಟಿಕೆಗಳ ಮೂಲಕ ರವಾನೆಯಾಗಿರುವುದು ಸುಳ್ಳಲ್ಲ. ಎಸ್.ಎಸ್.ಎಲ್.ಸಿ, ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಮುಂದೆ ಹೇಗೆ? ಏನು? - ಭವಿಷ್ಯಕ್ಕೆ ಮಾರ್ಗದರ್ಶನ, ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಪರೀಕ್ಷೆಗಳನ್ನು ಎದುರಿಸುವುದು ಹೇಗೆ? ತಜ್ಞರಿಂದ ಮಾದರಿ ತರಗತಿಗಳು -‘ಮಹಿಳಾ ಸಬಲೀಕರಣ’ ಕಮ್ಮಟಗಳು, ‘ಸುಧಾರಿತ ಕೃಷಿ’ ಕೃಷಿ ವಿಜ್ಞಾನಿಗಳೊಂದಿಗೆ ‘ಕೃಷಿಕರ ಸಂವಾದ’ ಪರಿಸರದ ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ, ಗೌರವಿಸುವ ಜವಾಬ್ದಾರಿ, ಮಾಹಿತಿ ಹಕ್ಕು ಕಾಯಿದೆ 2005 ಹಾಗೂ ಜನಪ್ರತಿನಿಧಿಗಳ ವಿಶೇಷ ಕಾರ್ಯಕ್ರಮ, ಬಡತನದ ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಳಿಸುವವರನ್ನು ಗುರುತಿಸಿ ಪ್ರೋತ್ಸಾಹಿಸುವುದು, ಮಕ್ಕಳ ರಕ್ಷಕರ ಪೋಷಕರ ಪ್ರತಿಭೆಗೆ ವೇದಿಕೆಯಾಗಿ ಹೆತ್ತವರ ದಿನಾಚರಣೆ, ಹೀಗೆ ಕ್ರಮಿಸಿದ ದೂರ ಸಣ್ಣದಲ್ಲ.
ಪಂಚಾಯತು ಮಟ್ಟದಲ್ಲಿ ‘ಉತ್ತಮ ಶಾಲೆ’ ಎಂಬ ಅಭಿದಾನ; ಇದೀಗ ಉಪಜಿಲ್ಲಾ ಮಟ್ಟದ ‘ಉತ್ತಮ ಪಿ.ಟಿ.ಎ.’ ಎಂಬ ಪ್ರಶಸ್ತಿ ಗ್ರಾಮೀಣ ಪ್ರದೇಶದ ಈ ಶಾಲೆಯ ಒಟ್ಟು ಔನತ್ಯಕ್ಕೆ ಸಂದ ಗೌರವ. ಅರ್ಪಣಾ ಮನೋಭಾವದ ಶಿಕ್ಷಕ ವೃಂದ- ಸಿಬ್ಬಂದಿ, ಸಕಾಲದಲ್ಲಿ ಸ್ಪಂದಿಸುವ ಶಾಲಾ ವ್ಯವಸ್ಥಾಪಕರು, ರಕ್ಷಕ ಶಿಕ್ಶಕ ಸಂಘ, ಶಾಲೆಯ ಮೇಲೆ ಅಭಿಮಾನವಿರುವ ಊರ ಪರವೂರ ಸ್ನೇಹಿತರು, ಅವರವರ ಸ್ಥಾನಮಾನಗಳಿಗೆ ತಕ್ಕಂತೆ, ಎಲ್ಲರೊಡನೆಯೂ ಬೆರೆತು ಶಾಲಾಭಿವೃದ್ಧಿಯಲ್ಲಿ ಎಲ್ಲರನ್ನೂ ತೊಡಗಿಸಿಕೊಳ್ಳುವಂತೆ ವ್ಯವಹರಿಸುವ ಮುಖ್ಯೋಪಾಧ್ಯಾಯರು - ಈ ಎಲ್ಲಾ ಕಾರಣಗಳಿಂದ ಈ ಶಾಲೆ ಕೇವಲ ‘ಸ್ವರ್ಗ ಶಾಲೆ’ ಆಗಿರದೆ ಮಕ್ಕಳ ‘ಸ್ವರ್ಗ’ವಾಗಿದೆ.



No comments:

Post a Comment