Saturday, September 29, 2012


 ಶಿಕ್ಷಕ ದಿನಾಚಾರಣೆ  ವಿವಿಧ ಕಾರ್ಯಕ್ರಮ 
 






 ಶಿಕ್ಷಕ ದಿನಾಚರಣೆ
ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿ ಮಕ್ಕಳ ನೇತೃತ್ವದಲ್ಲಿ ಜರಗಿದ ಶಿಕ್ಷಕ  ದಿನಾಚರಣೆಯು ಒಂದು ಹೊಸ ಅನುಭವಕ್ಕೆ ಸಾಕ್ಷಿಯಾಯಿತು.
ಪ್ರತಿಯೋರ್ವ ಅಧ್ಯಾಪಕರಿಗೂ ಮಕ್ಕಳು ಹೂಗುಚ್ಛ,ಗ್ರೀಟಿಂಗ್‌ಕಾರ್ಡ್ ನೀಡಿ ಶುಭ ಕೋರಿದರು.ಆಶುಭಾಷಣ, ಶಿಕ್ಷಕರಿಗೆ ಹೆಕ್ಕಿ ಅಭಿನಯ, ಸಂಗೀತ ಕುರ್ಚಿ, ಹಗ್ಗ ಜಗ್ಗಾಟ ಮುಂತಾದ ಸ್ಪರ್ಧೆಗಳಿಗೆ ಮಕ್ಕಳೇ ತೀರ್ಪುಗಾರರಾಗಿದ್ದು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದರು.ಮಕ್ಕಳ ಪ್ರಾಯೋಜಕತ್ವದಲ್ಲಿ ಸಂಸ್ಕೃತ ಶಿಕ್ಷಕ ಶ್ರೀ ಕೆ.ಶಿವರಾಮ್ ಭಟ್ ರವರು ವಿಜೇತ ಅಧ್ಯಾಪಕರಿಗೆ ಬಹುಮಾನ ವಿತರಿಸಿದರು. ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದ ಬಿ.ಕೆ ಹಾಗೂ ಮುಖ್ಯೋಪಾಧ್ಯಾಯ ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ ರವರ ಸಮ್ಮುಖದಲ್ಲಿ ನಮ್ಮಶಾಲೆಯಲ್ಲಿ ಸುಮಾರು ೩೦ವರ್ಷಗಳ ವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಸರವು ಶ್ರೀ ಸುಬ್ರಹ್ಮಣ್ಯ ಭಟ್ ಹಾಗೂ  ಪುತ್ತೂರು ಫೀಲೋಮಿನ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸಿರುವ ಕೋಟೆ ಶ್ರೀ ವೆಂಕಟರಮಣ ಭಟ್ ಇವರ ಸ್ವ ಗೃಹದಲ್ಲಿ ಶಾಲು ಹೊದೆಸಿ,ಫಲ ತಾಂಬೂಲವನ್ನು ನೀಡಿ ಗುರುವಂದನಂ ಸಲ್ಲಿಸಲಾಯಿತು.           

                                                       

                                

Thursday, September 20, 2012

ಸಮವಸ್ತ್ರ ವಿತರಣೆ
       ಸ್ವರ್ಗ ಸ್ವಾಮೀವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ವಿಶೇಷ ಸಭೆ ನಡೆಯಿತು. ಈ ಸಂದರ್ಭದಲ್ಲಿ ದಾನಿಗಳು ಕೊಡ ಮಾಡಲ್ಪಟ್ಟ ಸಮವಸ್ತ್ರವನ್ನು ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದ ಬಿ.ಕೆ. ರವರು ವಿತರಿಸಿದರು.ಮಂಗಳೂರಿನ ಅನುರಾಗ್ ಎಜ್ಯುಕೇಶನ್ ಟ್ರಸ್ಟ್ ನ ಮಾಲಕ ಬಿ.ಎನ್.ಭಟ್, ಪ್ರಸನ್ನ ಕುಮಾರ್ ವಿ.ಎಸ್, ಶ್ರೀವಿದ್ಯಾ ನಿಖಿಲ್ ರಾಜ್,  ಬಟ್ಯ ಪಾಟಾಳಿ ವಾಟೆ, ಲಕ್ಷ್ಮಿಪ್ರಿಯ ಸರಳಾಯ, ಸಾವಿತ್ರಿ ಶ್ರೀಪತಿ ಭಟ್ ಸ್ವರ್ಗ, ಇವರು ದಾನಿಗಳಾಗಿ ಸಹಕರಿಸಿದರು. ಇವರ ಪ್ರಯೋಜಕತ್ವದಲ್ಲಿ ಶಾಲಾ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು.
 




ಓಣಂ ಆಚರಣೆ
       ಐಶ್ವರ್ಯ,ಸಮೃದ್ಧಿ ಜಾತಿಮತಗಳ ಅಂತರವನ್ನು ದೂರಮಾಡಿ ವಿವಿಧತೆಯಲ್ಲಿ ಏಕತೆಯನ್ನು ಮೂಡಿಸುವ ಸಂಕೇತವಾಗಿ ಆಚರಿಸಲ್ಪಡುವ ಕೇರಳದ ನಾಡ ಹಬ್ಬ ಓಣಂ.
          ನಮ್ಮ ಶಾಲೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಹಬ್ಬದ ವೈಶಿಷ್ಟ್ಯಗಳಲ್ಲಿ ಒಂದಾದ ಪೂಕಳಂಹೂವಿನ ರಂಗವಲ್ಲಿಯನ್ನು ಪ್ರತಿ ತರಗತಿಯ ಮಕ್ಕಳು ತಮ್ಮ ತರಗತಿಯಲ್ಲಿ ರಚಿಸಿದರು. ೫ನೇ ತರಗತಿ ವಿದ್ಯಾರ್ಥಿ ಪ್ರದ್ಯೋತ್ ಕುಮಾರ್ 
ಮಹಾಬಲಿವೇಷಧಾರಿಯಾಗಿ ಪ್ರತಿ ತರಗತಿಯ ಮಕ್ಕಳ ಯೋಗ ಕ್ಷೇಮವನ್ನು ವಿಚಾರಿಸಲಾಯಿತು. ಓಣಂ ಸದ್ಯ ಕ್ಕೆ ೨೨ ಬಗೆಯ ವೈವಿಧ್ಯಮಯ ವ್ಯಂಜನಗಳಿದ್ದು ಭೂರಿ ಭೋಜನ ನಡೆಯಿತು. ಹೆತ್ತವರ ಸಹಕಾರದಿಂದ ಈ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೆರವೇರಿಸಲು ಸಾಧ್ಯವಾಯಿತು. ಸಾಮರಸ್ಯದ ಸಂಕೇತವಾದ ಓಣಂ ಆಚರಣೆಯಲ್ಲಿ ಅವರೂ ನಮ್ಮ ಜೊತೆಗಿದ್ದು ಹಬ್ಬದ ಸವಿಯನ್ನುಂಡರು.


 











                   ಸ್ವರ್ಗ ಕೃಷಿ ದಿನಾಚರಣೆ -

       ಸ್ವರ್ಗ ಸ್ವಾಮೀ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷಿಕರ ದಿನಾಚರಣೆ ಜರಗಿತು. ಜೀವ ವೈವಿಧ್ಯ ವರ್ಷದ ಹಿನ್ನಲೆಯಲ್ಲಿ ಕಳೆದ ವರ್ಷ ಶಾಲಾ ವಠಾರದಲ್ಲಿ ಬಾಳೆ,ತೊಂಡೆ, ಬದನೆ, ಬಸಳೆ, ಅಲಸಂಡೆ,ಹರಿವೆ,ಅನನಾಸು ಸಹಿತ ನಾನಾ ಬೆಳೆಗಳನ್ನು ಬೆಳೆಸಲಾಗಿದ್ದು ಉತ್ತಮ ಇಳುವರಿಯನ್ನು ಪಡೆಯಲಾಗಿತ್ತು.ಕೃಷಿ ಕಾರ್ಯದಲ್ಲಿ ಉತ್ತಮವಾಗಿ ನಿರ್ವಹಿಸಿದ ವಿದ್ಯಾರ್ಥಿಗಳಾದ ಮಾಸ್ಟರ್ ಪ್ರತಾಪ್ ಮತ್ತು ಲೋಹಿತ್ ಇವರಿಗೆ ವಿಶೇಷ ಕೃಷಿ ಉಡುಗೊರೆ ನೀಡಿ ಗೌರವಿಸಲಾಯಿತು.
      ದೈನಂದಿನ ಎಸೆಂಬ್ಲಿಯಲ್ಲಿ ಮುಖ್ಯ ಶಿಕ್ಷಕ ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ ಮಕ್ಕಳಿಗೆ ಉಡುಗೊರೆ ನೀಡಿ, ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು.

ಸ್ವಾತಂತ್ರ್ಯೋತ್ಸವದ ಒಂದು ನೋಟ 









ಸ್ವಾತಂತ್ರ್ಯೋತ್ಸವ

           ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿ ೬೫ನೇ ಸ್ವಾತಂತ್ರ್ಯೋತ್ಸವವು ೬೫ ವೇಷದೊಂದಿಗೆ ಸಂಭ್ರಮದಿಂದ ಜರಗಿತು. ಸ್ವಾತಂತ್ರ್ಯ ಉತ್ಸವದ ಅತಿಥಿಗಳಾಗಿ ಆಗಮಿಸಿದ ಛತ್ತೀಸಗಢ್ ಪ್ರಾಂತ್ಯದಲ್ಲಿ ಸೈನಿಕರಾಗಿ ಸೇವೆ ನಿರ್ವಹಿಸುತ್ತಿರುವ ರಮೇಶ್ ನಾಯ್ಕರವರು ಧ್ವಜಾರೋಹಣಗೈದರು. ಅತಿಥಿಗಳಿಗೆ ವ್ಯವಸ್ಥಾಪಕರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
        ಎಲ್.ಪಿ. ವಿಭಾಗದ ಮಕ್ಕಳಿಂದ ದೇಶಭಕ್ತಿಯನ್ನು ಸಾರುವ ಹಾಡಿಗೆ ೨ ಡಿಸ್ ಪ್ಲೇ ಡ್ಯಾನ್ಸ್‌ಗಳ ಪ್ರದರ್ಶನ ಜರಗಿತು. ೬೫ನೇ ಹರೆಯದ ಸ್ವಾತಂತ್ರ್ಯೋತ್ಸವಕ್ಕೆ ಸ್ವಾತಂತ್ರ್ಯ ಹೋರಾಟಗಾರರ, ವಿವಿಧ ರಾಜ್ಯದ ಉಡುಪುಗಳ, ವಿವಿಧ ಧರ್ಮದ ವೇಷ ದೊಂದಿಗೆ ಜಾತ್ಯಾತೀತ ರಾಷ್ಟ್ರದ ಕಲ್ಪನೆಯನ್ನು ಮೂಡಿಸುವ ಸಾಕ್ಷ್ಯ ಪ್ರದರ್ಶನವನ್ನು ಪಾತ್ರ ಪರಿಚಯದೊಂದಿಗೆ ಸ್ಥಬ್ಧ ಚಿತ್ರವನ್ನು ಪ್ರಸ್ತುತ ಪಡಿಸಲಾಯಿತು.
      ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ವ್ಯವಸ್ಥಾಪಕ ಶ್ರೀ ಹೃಷಿಕೇಶ ವಿ.ಎಸ್, ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದ ಬಿ.ಕೆ. ಮುಖ್ಯೋಪಾಧ್ಯಾಯರು ಶ್ರೀ ಕೆ.ವೈಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಇಡೀ ರಾಷ್ಟ್ರವೇ ಸಂಭ್ರಮಿಸುವ ಈ ಕಾರ್ಯಕ್ರಮಕ್ಕೆ ಬಹು ಸಂಖ್ಯೆಯಲ್ಲಿ ಹೆತ್ತವರು, ಊರವರು ಆಗಮಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.

                            

 











ಮಾತೃ ಸಂಗಮದ ವಿಶೇಷ ಸಭೆ
      
      ಮಾತೃ ಸಂಗಮದ ವಿಶೇಷ ಸಭೆ  ಶ್ರೀಮತಿ ರಾಧಿಕಾ ಎಡಮಲೆ ಯವರ ಅಧ್ಯಕ್ಷತೆಯಲ್ಲಿ ಜರಗಿತು. ಮಾತೃ ಸಂಗಮದ ಕಾರ್ಯದರ್ಶಿ ಶ್ರೀಮತಿ ಬಿ. ಗೀತಾ ಕುಮಾರಿಯವರು ವರ ಮಹಾಲಕ್ಷ್ಮೀ ಪೂಜೆಯ ಆಯ-ವ್ಯಯವನ್ನು ಮಂಡಿಸಿದರು. ಪೂಜೆಯ ಸಾಧಕ ಬಾಧಕಗಳ ಕುರಿತು ಚರ್ಚಿಸಲಾಯಿತು. ಅಧಿಕ ಪೂಜಾ ನೊಂದಣೆಯಾಗಲು ಸಹಕರಿಸಿದವರಿಗೆ ಕಿರು ಕಾಣಿಕೆಯನ್ನಿತ್ತು ಗೌರವಿಸಲಾಯಿತು.ಮುಂದಿನ ದಿನಗಳಲ್ಲಿ ಮಾತೃ ಸಂಗಮದ ವತಿಯಿಂದ ಹಮ್ಮಿಕೊಳ್ಳಬಹುದಾದ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.


Tuesday, September 18, 2012


ಶ್ರೀ ಕೃಷ್ಣ ಜನ್ಮಾಷ್ಟಮಿ

ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿ ಶ್ರೀ ಕೃಷ್ಣಾಷ್ಟಮಿ ಅಂಗವಾಗಿ ಎಲ್.ಪಿ. ವಿಭಾಗದ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ, ಭಕ್ತಿಗೀತೆ,  ಸ್ಪರ್ಧೆ ಜರಗಿತು. ಯು.ಪಿ. ವಿಭಾಗದ ಮಕ್ಕಳಿಗೆ ಪೌರಾಣಿಕ ಕಥೆ, ಭಕ್ತಿಗೀತೆ ಹಾಗು ಪುರಾಣ ರಸಪ್ರಶ್ನೆ ಜರಗಿತು. ಕಾರ್ಯಕ್ರಮದ ಕೊನೆಯಲ್ಲಿ ವಿಜೇತರಿಗೆ ಶಾಲಾ ಮುಖ್ಯೋಪಾಧ್ಯಾಯರು ಬಹುಮಾನ ವಿತರಿಸಿದರು.  



ಸ್ವರ್ಗದಲ್ಲಿ ಬಾಂಬ್ ಸ್ಫೋಟ - ಹಲವರಿಗೆ ಗಾಯ, ಕೆಲವರು ಆಸ್ಪತ್ರೆಗೆ.

      ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ ಸಮಾಜ ಹಾಗೂ ವಿಜ್ಞಾನ ಕ್ಲಬಿನ ಜಂಟಿ ಆಶ್ರಯದಲ್ಲಿ ಹಿರೋಶಿಮ ಮತ್ತು ನಾಗಸಾಕಿ ದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು. ಹಿರೋಶಿಮ, ನಾಗಸಾಕಿ ನಗರಗಳಲ್ಲಾದ ಅಣುಬಾಂಬ್ ದಾಳಿ ಪ್ರಕರಣವನ್ನು ಮಕ್ಕಳು ಬಾಂಬ್ ಸ್ಫೋಟಕ್ಕೆ ಬಲಿಯಾಗುವಂತೆ, ಸುಟ್ಟುಗಾಯಗೊಂಡವರಂತೆ,ಪ್ರಾಣಾಪಾಯದಿಂದ ಪಾರಾದವರನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುವ ದೃಶ್ಯಗಳ ಪ್ರಾತ್ಯಕ್ಷಿಕೆ ನೀಡಿದರು.
      ಹಿರೋಶಿಮಾ ನಾಗಸಾಕಿ ದಿನದ ಹಿನ್ನಲೆ, ಅಣುಬಾಂಬ್ ದಾ ಳಿಯಿಂದಾದ ನಾಶ ನಷ್ಟಗಳ ಸವಿವರ ಪ್ರಬಂಧವನ್ನು ವಿಧ್ಯಾರ್ಥಿನಿಯರಾದ ಕುಮಾರಿ ಉಷಾ ಹಾಗೂ ಅನುಶ್ರೀ ಯವರು ಮಂಡಿಸಿದರು. ಈ ದುರ್ಘಟನೆಯ ಕುರಿತಾದ ನೆನೆಪಿಗಾಗಿಎಂಬ ಕಾವ್ಯವನ್ನು ಶ್ರೀ ರಮಣ ಭಾರಧ್ವಜ್ ವಾಚಿಸಿದನು.

                                                                               





ರವೀಂದ್ರನಾಥ ಠಾಗೂರ್

ರವೀಂದ್ರನಾಥ ಠಾಗೂರ್ ರವರ ಸಂಸ್ಮರಣೆಯನ್ನು ಆಚರಿಸಲಾಯಿತು. ಅವರ ಜೀವನ ಚರಿತ್ರೆಯನ್ನು ಶಾಲೆಗೊಳ ಪಟ್ಟ ಸ್ವರ್ಗ ತರಂಗ ಮಕ್ಕಳ ರೇಡಿಯೋ ಕೇಂದ್ರದಲ್ಲಿ ಬಿತ್ತರಿಸಲಾಯಿತು. ಅವರ ಭಾವಚಿತ್ರವನ್ನು ಬಾಲೋದ್ಯಾನದಲ್ಲಿ ಅನಾವರಣಗೊಳಿಸಲಾಯಿತು.




   ಸ್ವರ್ಗ - ಶಾಲಾ ಮಟ್ಟದ ಸಂಸ್ಕೃತ ದಿನಾಚರಣೆ.

       ಶ್ರಾವಣ ಹುಣ್ಣಿಮೆಯ ಪ್ರಯುಕ್ತ ಸಂಸ್ಕೃತ ಕ್ಲಬ್ ನ ವತಿಯಿಂದ ಸಂಸ್ಕೃತ ದಿನದ ಆಚರಣೆಯು  ನಮ್ಮ ಶಾಲೆಯಲ್ಲಿ ಜರಗಿತು. ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಕೆ.ವೈ. ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.









ಸಂಸ್ಕೃತ ದಿನದ ಪ್ರಯುಕ್ತ, ಸಂಸ್ಕೃತ ಅಧ್ಯಾಪಕ ಕೆ.ಶಿವರಾಮ.ಭಟ್ ಅವರ ನೇತೃತ್ವದಲ್ಲಿ ನಡೆದ ಸಂಸ್ಕೃತ ನಾಮಧೇಯದ ನಿತ್ಯೋಪಯೋಗಿ ವಸ್ತುಗಳ ವಸ್ತು ಪ್ರದರ್ಶನ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಸಂಸ್ಕೃತ ಭಾಷೆ ಎಲ್ಲ ಭಾಷೆಗಳ ಮಾತೃ ಭಾಷೆ. ದೇವ ಭಾಷೆಯಾಗಿರುವ ಇದನ್ನು ಅಭ್ಯಾಸ ಮಾಡುವುದರಿಂದ ನಮ್ಮಲ್ಲಿ ಉತ್ತಮ ಸಂಸ್ಕಾರ ಮೂಡುವುದು ಎಂದು ಹಿತವಚನ ವಿತ್ತರು.
          ಮಕ್ಕಳಿಂದ ಸಮೂಹಗೀತೆ, ಅಭಿನಯಗೀತೆ,ನಾಟಕ ಮೊದಲಾದ ಕಾರ್ಯಕ್ರಮಗಳು ಜರಗಿತು. ಸಂಸ್ಕೃತದ ಎಲ್ಲಾ ಮಕ್ಕಳನ್ನು ಸೇರಿಸಿ ಆಯೋಜಿಸಿದ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂತು. ಮಾಸ್ಟರ್ ಸುಬ್ರಹ್ಮಣ್ಯ.ಎನ್ ಕಾರ್ಯಕ್ರಮ ನಿರೂಪಿಸಿ,ಕುಮಾರಿ ರೇಷ್ಮ ಎಸ್ ವಂದಿಸಿದರು.                                








 

Monday, September 17, 2012


ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ
           ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಆಚರಿಸಲ್ಪಡುವ ವ್ರತವರ ಮಹಾಲಕ್ಷ್ಮೀ ಪೂಜೆಯನ್ನು ನಮ್ಮ ಶಾಲಾ ಮಾತೃ ಸಂಗಮದ ವತಿಯಿಂದ ಶಾಲಾ ವಠಾರದಲ್ಲಿ ಆಚರಿಸಲಾಯಿತು. ಪುರೋಹಿತ ಶ್ರೀಧರ ಭಟ್ ರವರ ನೇತೃತ್ವದಲ್ಲಿ ಹಿರಿಯ ಮುತ್ತೈದೆ ಶ್ರೀಮತಿ ಸುಶೀಲ ಶಿರಂತಡ್ಕ ಇವರು ಪೂಜೆಯನ್ನು ನೆರವೇರಿಸಿದರು. ಪೂಜೆಗೆ ಆಗಮಿಸಿದ ಸುಮಂಗಲಿಯರಿಗೆ ಅರಶಿನ, ಕುಂಕುಮ ಹಚ್ಚಿ, ಹೂ ನೀಡಿ ಸ್ವಾಗತಿಸಲಾಯಿತು.  ಆರೋಗ್ಯ, ಮಾನಸಿಕ ಶಾಂತಿ, ನೆಮ್ಮದಿ, ಸಕಲೈಶ್ವರ್ಯವನ್ನು ಕರುಣಿಸಲೆಂದು ಮಹಾಲಕ್ಷ್ಮಿಯನ್ನು ಪ್ರಾರ್ಥಿಸಲಾಯಿತು. ಸುಮಾರು ೪೦೦ಕ್ಕೂ ಅಧಿಕ ಮಂದಿ ಮುತ್ತೈದೆಯರು ಆಗಮಿಸಿ ಶ್ರೀ ವರ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಿದ್ದು, ಸುಮಾರು ೬೭೦ ಪೂಜೆಗಳು ನೊಂದವಣೆಗೊಂಡವು. ಪೂಜೆಗೆ ಆಗಮಿಸಿದ ಭಕ್ತಾದಿಗಳಿಗೆ ಫಲಾಹಾರದ ವ್ಯವಸ್ಥೆಯನ್ನು ಮಾಡಲಾಯಿತು. ಈ ರೀತಿ ಸಾಮೂಹಿಕ ಪೂಜೆಗಳಿಂದ ಸಮಾಜದಲ್ಲಿ ಧಾರ್ಮಿಕ ಜಾಗೃತಿಯುಂಟಾಗಿ ಸಾಮಾಜಿಕ ಸಾಮರಸ್ಯವು ಬೆಳೆಯುತ್ತದೆ.
 ಕಳೆದ ಶೈಕ್ಷಣಿಕ ವರ್ಷಗಳಿಂದ ನಮ್ಮ ಶಾಲಾವಿದ್ಯಾರ್ಥಿಗಳಿಗೆ    ಉಚಿತ ಹೊಲಿಗೆ ತರಬೇತಿಯನ್ನು ನೀಡುವ ಮಾತೃ ಸಂಘದ ಸದಸ್ಯೆಯರಾದ  ಶ್ರೀಮತಿ ಅನುರೂಪ ಕೆದಂಬಾಯಿಮೂಲೆ ಹಾಗೂ ಶ್ರೀಮತಿ ಅರ್ಚನಾ ಪೆರಿಕ್ಕಾನ ಇವರನ್ನು ಮಾತೃ ಸಂಘದ ಪರವಾಗಿ ಹಿರಿಯ ಮುತ್ತೈದೆ ಶ್ರೀಮತಿ ಸುಶೀಲ ಶಿರಂತಡ್ಕ ಇವರು ಕಿರು ಕಾಣಿಕೆಯನ್ನು ನೀಡಿ ಗೌರವಿಸಿದರು.














Monday, September 10, 2012

ಇಂಗ್ಲೀಷ್ ಕ್ಲಬ್ - ಚಟುವಟಿಕೆ

       ನಮ್ಮ ಶಾಲೆಯಲ್ಲಿ ದಿನಾಂಕ 26.07.12 ನೇ ಗುರುವಾರದಂದು ಇಂಗ್ಲೀಷ್ ಕ್ಲಬ್‌ನ ನೇತೃತ್ವದಲ್ಲಿ ಕಾರ್ಯಕ್ರಮ ಜರಗಿತು. ಮಾಸ್ಟರ್ ಪ್ರತಾಪ್ ಎಸ್.ಕೆ. ಯವರ ಅಧ್ಯಕ್ಷತೆಯಲ್ಲಿ, ಕ್ಲಬಿನ ಸದಸ್ಯರ ಸಹಕಾರದಿಂದ  ತಯಾರಿಸಿದ ವಿವಿಧ 'Word game & puzzel ನ್ನು ಚಟುವಟಿಕೆಯಾಗಿ ನೀಡಲಾಯಿತು. ಕಾರ್ಯದರ್ಶಿ ರಶ್ಮಿ.ಎಸ್.ಜಿ. ಹಾಗೂ ಸಹ ಕಾರ್ಯದರ್ಶಿ ಕೌಶಿಕ್ ಘಾಟೆ.ಡಿ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯರಾದ ಸುಬ್ರಹ್ಮಣ್ಯ.ಎನ್ ಸ್ವಾಗತಿಸಿ, ತುಳಸಿ.ಪಿ. ಧನ್ಯವಾದಗೈದರು.
ಕಾರ್ಗಿಲ್ ವಿಜಯ ದಿನ

          ಕಾರ್ಗಿಲ್ ವಿಜಯ ದಿನದ ಅಂಗವಾಗಿ 1999 ರ ಐತಿಹಾಸಿಕ 74 ದಿನಗಳವರೆಗೆ ನಡೆದ ಕಾರ್ಗಿಲ್ ಯುದ್ಧದ ಹಿನ್ನಲೆ, ನಾಶ ನಷ್ಟ, ಯೋಧರ ಸಾಧನೆ, ದೇಶಕ್ಕಾಗಿ ಮಡಿದ ವೀರರ ಕುರಿತು ಮಾಹಿತಿಯನ್ನು ಮಕ್ಕಳ ಬಾನುಲಿ ಕೇಂದ್ರ 'ಸ್ವರ್ಗ ತರಂಗ'ದ ಮೂಲಕ ಪ್ರಸಾರ ಮಾಡಲಾಯಿತು. ಕಾರ್ಗಿಲ್ ಯುದ್ಧದ ಪತ್ರಿಕಾ ತುಣುಕುಗಳನ್ನು ಬಾಲೋದ್ಯಾನದಲ್ಲಿ ಅನಾವರಣಗೊಳಿಸಲಾಯಿತು.


ಎಸ್.ಎಲ್.ಭೈರಪ್ಪ ಜನ್ಮದಿನ

     'ಕಾದಂಬರಿಕಾರರ ದೊರೆ' ಎಸ್.ಎಲ್.ಭೈರಪ್ಪ ರವರ ಜನ್ಮದಿನದ ಅಂಗವಾಗಿ ಎಸೆಂಬ್ಲಿಯಲ್ಲಿ ಅವರ ಕಿರು ಪರಿಚಯ ಮಾಡಲಾಯಿತು.
CPTA
      
         ನಮ್ಮ ಶಾಲೆಯಲ್ಲಿ ಕ್ಲಾಸು ರಕ್ಷಕ ಶಿಕ್ಷಕ ಸಂಘದ ಸಭೆ 25.07.2012 ರಂದು ನಡೆಯಿತು. ಈ ಸಭೆಯಲ್ಲಿ ೧ರಿಂದ ೪ನೇ ತರಗತಿಯ ವರೆಗಿನ ಎಲ್ಲಾ ವಿದ್ಯಾರ್ಥಿಗಳ ಹೆತ್ತವರು ಭಾಗವಹಿಸಿದ್ದರು. ಆಯಾ ತರಗತಿಯಲ್ಲಿ ಹೆತ್ತವರು,ಅಧ್ಯಾಪಕರೊಂದಿಗೆ ಚರ್ಚೆ ನಡೆಯಿತು. ಹೆತ್ತವರು ನಿರಂತರವಾಗಿ ಮಗುವಿನ ಚಟುವಟಿಕೆಯನ್ನು ಗಮನಿಸುವುದರಿಂದ ಮಗುವಿನ ಕಲಿಕಾ ಗುಣಮಟ್ಟದಲ್ಲಿ ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸಬಹುದೆಂದು ಅಧ್ಯಾಪಕರು ಸಲಹೆಯಿತ್ತರು.ಈ ಸಂದರ್ಭದಲ್ಲಿ ಹೆತ್ತವರು ನಿತ್ಯ ಮನೆ ಕೆಲಸ, ಒತ್ತಕ್ಷರ ಪದಗಳು, ಕಾ ಗುಣಿತ, ಮಗ್ಗಿಗಳನ್ನು ನೀಡಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  

Tuesday, September 4, 2012

       ಬಾಲ ಗಂಗಾಧರ ತಿಲಕ್ ಜನ್ಮದಿನ-ಜುಲೈ.23       

         ಭಾರತ ಸ್ವಾತಂತ್ರ್ಯಕ್ಕೆ ಹೋರಡಿದ ಧೀಮಂತ ನಾಯಕರಲ್ಲಿ ಬಾಲಗಂಗಾಧರ ತಿಲಕ್ ಒಬ್ಬರು. ಕೇಸರಿಹಾಗೂ ಬಂಗಾಳ ಗಜೆಟೆಂಬ ಪತ್ರಿಕೆಗಳ ಮೂಲಕ ಬ್ರಿಟಿಷರ ದಬ್ಬಾಳಿಕೆಯ ಸಚಿತ್ರ ಲೇಖನ ಬರೆದು,ಜನ ಜಾಗೃತಿ ಮೂಡಿಸಿದ ವೀರ. ಇವರ ಜನ್ಮದಿನಾಚಣೆಯ ಅಂಗವಾಗಿ 7ನೇ ತರಗತಿಯ ವಿದ್ಯಾರ್ಥಿ ಕೌಶಿಕ್ ಘಾಟೆ ಬಾಲ ಗಂಗಾಧರ ತಿಲಕ್ ರವರ ವೇಷಧಾರಿಯಾಗಿ ಅವರ ವ್ಯಕ್ತಿ ಪರಿಚಯವನ್ನು ಮಾಡಿದನು. ಈ ಸಂದರ್ಭದಲ್ಲಿ ಅವರೊಂದಿಗೆ ಸಂದರ್ಶನ ನಡೆಯಿತು. ಮಕ್ಕಳ ರೇಡಿಯೋ ಕೇಂದ್ರದಲ್ಲಿ ಅವರ ಜೀವನ ಚರಿತ್ರೆಯನ್ನು ಓದಲಾಯಿತು. ಮುಖ್ಯೋಪಾಧ್ಯಾಯ ಶ್ರೀ ಕೆ.ವೈ. ಸುಬ್ರಹ್ಮಣ್ಯ ಭಟ್ ರವರು ತಿಲಕರ ಜೀವನ ಆದರ್ಶಗಳನ್ನು ವಿವರಿಸಿ ಮಕ್ಕಳಲ್ಲಿ ಸ್ಪೂರ್ತಿ ತುಂಬಿದರು.


  ಚಾಂದ್ರ ದಿನ - ಜುಲೈ21

           ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ ಚಾಂದ್ರ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮ ಜರಗಿತು. ದೈನಂದಿನ ಎಸೆಂಬ್ಲಿಯಲ್ಲಿ ಚಾಂದ್ರಯಾನ ದಿನದ ವೈಶಿಷ್ಟ್ಯವನ್ನು ಪ್ರಬಂಧ ರೂಪದಲ್ಲಿ ಮಂಡಿಸಲಾಯಿತು. ಚಾಂದ್ರಯಾನದ ಎನಿಮೇಶನ್ ಸಿಡಿಯನ್ನು ಪ್ರದರ್ಶಿಸಿ, ಅದಕ್ಕೆ ಪೂರಕ ಮಾಹಿತಿಯನ್ನು ಶಿಕ್ಷಕ ವೆಂಕಟವಿದ್ಯಾಸಾಗರ್ ರವರು ತಿಳಿಸಿದರು.ಬಳಿಕ ಮಕ್ಕಳಿಗೆ ರಸಪ್ರಶ್ನಾ ಕಾರ್ಯಕ್ರಮ ನಡೆಸಲಾಯಿತು. ಚಾಂದ್ರಯಾನ ದಿನಕ್ಕೆ ಅನುಗುಣವಾಗಿ ಮಕ್ಕಳು ಸಂಗ್ರಹಿಸಿದ ಮಾಹಿತಿಯನ್ನು ಶಾಲಾ ಬಾಲೋದ್ಯಾನದಲ್ಲಿ ಅನಾವರಣಗೊಳಿಸಲಾಯಿತು.



ಶೇಣಿ ಸ್ಮೃತಿ 

   ಮಾತಿನ ಲೋಕದ ಮಹಾಕವಿ ಯಕ್ಷಗಾನ ಭೀಷ್ಮ ಯಕ್ಷಲೋಕದ ಮಹಾತೇರುಈ ವಿಶೇಷಣಗಳಿಂದ ಕೂಡಿದ ಶೇಣಿ ಗೋಪಾಲಕೃಷ್ಣ ಭಟ್ ರವರು ಯಕ್ಷಗಾನ ಕಲಾವಿದ ಮಾತ್ರವಲ್ಲದೆ ಹರಿದಾಸ, ಅರ್ಥಧಾರಿ,ಓರ್ವ ತತ್ವಜ್ಞಾನಿ, ಉತ್ತಮ ವಾಗ್ಮಿ ಹಾಗೂ ಒಳ್ಳೆಯ ಪತ್ರಿಕಾ ಓದುಗ ಕೂಡಾ. ಇಷ್ಟೊಂದು ಖ್ಯಾತಿ ಪಡೆದ, ಕಾಸರಗೋಡಿನವರೇ ಆದ ಶೇಣಿಯವರು ಅಭಿನಯಿಸಿದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನವನ್ನು ಶೇಣಿ ಸ್ಮೃತಿ ಯ ಅಂಗವಾಗಿ ಪ್ರದರ್ಶಿಸಲಾಯಿತು. ಶಾಲಾ ದೈನಂದಿನ ಎಸೆಂಬ್ಲಿಯಲ್ಲಿ ಶೇಣಿಯವರ ವ್ಯಕ್ತಿತ್ವವನ್ನು ಪರಿಚಯಿಸಲಾಯಿತು.



ಶಾಲಾ ಕ್ಲಬ್‌ಗಳ ಉದ್ಘಾಟನೆ 

   ಮಕ್ಕಳಿಗೆ ತಮ್ಮ ವಿವಿಧ ರೀತಿಯ ಪ್ರತಿಭೆಗಳನ್ನು ಪ್ರಕಟಿಸಲು ಶಾಲಾ ಕ್ಲಬ್‌ಗಳು ಅವಕಾಶ ಮಾಡಿಕೊಡುತ್ತದೆ. ಅನೇಕ ವಿಜ್ಞಾನದ ಸಂಶೋಧನೆಗಳು, ಆವಿಷ್ಕಾರಗಳನ್ನು ತಿಳಿಯಲು ಕ್ಲಬ್‌ಗಳು ಸಹಾಯ ಮಾಡಿಕೊಡುತ್ತವೆ. ಹೊಸ ರೀತಿಯ ಪ್ರಯೊಗಗಳನ್ನು ಮಾಡಲು, ಪ್ರಯೋಗಿಸಲು ಮಕ್ಕಳಿಗೆ ಅವಕಾಶ ಮಾಡಿಕೊಡುತ್ತದೆ. ಕ್ಲಬ್ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಬುದ್ಧಿ ವಿಕಾಸಗೊಳ್ಳುತ್ತದೆ, ಮಾತ್ರವಲ್ಲದೆ ಕ್ಲಬಿನ ಮುಖಾಂತರ   ಸ್ವತಃ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವಕಾಶಗಳು ಲಭಿಸುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಕೆ.ವೈ. ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಔಪಚಾರಿಕವಾಗಿ ಕ್ಲಬ್‌ಗಳನ್ನು ಉದ್ಘಾಟಿಸಿದರು.

   ಗಣಿತ,ಹಿಂದಿ,ಇಂಗ್ಲೀಷ್, ವಿಜ್ಞಾನ,ಸಂಸ್ಕೃತ,ಹೆಲ್ತ್,ವಿದ್ಯಾರಂಗಂ ಇತ್ಯಾದಿ ಕ್ಲಬ್‌ಗಳಿಗೆ ಕ್ರಮವಾಗಿ ಪದ್ಮಾನಾಭ.ಆರ್.ಮಿಥುನ್.ವಿ.ಆರ್, ಪಿ.ಶಿವರಾಮ್ ಭಟ್,ಎಸ್.ಎನ್.ವೆಂಕಟವಿದ್ಯಾಸಾಗರ್,ಕೆ.ಶಿವರಾಮ್ ಭಟ್, ಸಚ್ಚಿದಾನಂದ.ಎಸ್, ಬಿ.ಗೀತಾ ಕುಮಾರಿ ಇವರನ್ನು ಸಂಚಾಲಕರಾಗಿ ಆರಿಸಲಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಕುಮಾರಿ ಧನ್ಯ ಶ್ರೀ ಸ್ವಾಗತಿಸಿ, ಕುಮಾರಿ ಸಂಧ್ಯಾ ಧನ್ಯವಾದ ಗೈದಳು.

ಸ್ಕೂಲ್ ಪಾರ್ಲಿಮೆಂಟ್ ರಚನೆ

      ನಮ್ಮ ಶಾಲಾ ಸ್ಕೂಲ್ ಪಾರ್ಲಿಮೆಂಟ್ ರೂಪೀಕರಣವು ಜುಲೈ 5 ರಂದು ನಡೆಯಿತು. ಚುಣಾವಣಾ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಮುಂಚಿತವಾಗಿ ಬಲೆಟ್ ಪೇಪರ್ ನೀಡಲಾಯಿತು. ಮತದಾನಕ್ಕೆ 'IT' ಸೌಲಭ್ಯವನ್ನು ಬಳಸಲಾಯಿತು. ಪ್ರತಿ ತರಗತಿಯನ್ನು ಮತದಾನ ಕ್ಷೇತ್ರವನ್ನಾಗಿ ಮಾಡಿ ನಿಗದಿತ ಸಂಖ್ಯೆಯ ಅಭ್ಯರ್ಥಿಗಳನ್ನು ಆರಿಸಲಾಯಿತು. ಆಯ್ಕೆಗೊಂಡ ಅಭ್ಯರ್ಥಿಗಳ ಒಕ್ಕೂಟದಲ್ಲಿ ಅಧಿಕಾರವನ್ನು ಪರಸ್ಪರ ಹಂಚಲಾಯಿತು. ನೂತನ ಪಾರ್ಲಿಮೆಂಟಿಗೆ ಆಯ್ಕೆಗೊಂಡ ಸದಸ್ಯರು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ ರವರ ಸಮ್ಮುಖದಲ್ಲಿ ಸತ್ಯ ಪ್ರತಿಜ್ಞೆ ಸ್ವೀಕರಿಸಿದರು.
       ಈ ಸಂದರ್ಭದಲ್ಲಿ ಅವರು ಸ್ಕೂಲ್ ಪಾರ್ಲಿಮೆಂಟ್ ವಿದ್ಯಾರ್ಥಿಗಳಿಗೆ ಸರಕಾರ ರಚನೆ, ಸದನ ಕಲಾಪ ಹಾಗೂ ಆಡಳಿತದ ಅನುಭವವನ್ನು ನೀಡುತ್ತದೆ, ಜೊತೆಗೆ ನೂತನ ಆಡಳಿತ ಸರಕಾರವು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪಾಲಿಸಿ ಕರ್ತವ್ಯ ನಿರ್ವಹಿಸಬೇಕೆಂದು ನುಡಿದರು.ಹಿರಿಯ ಶಿಕ್ಷಕ ಪಿ.ಶಿವರಾಮ್ ಭಟ್ ಚುಣಾವಣಾ ಮೇಲ್ವಿಚಾರಕರಾಗಿ ಸಹಕರಿಸಿದರು.


 





ಮಾತೃ ಮಂಡಳಿ ಸಭೆ

ಮಾತೃ ಸಂಗಮದ ಅಧ್ಯಕ್ಷೆ ಶ್ರೀಮತಿ ರಾಧಿಕಾ ಎಡಮಲೆಯವರ ಅಧ್ಯಕ್ಷತೆಯಲ್ಲಿ ಸಾಯಂಕಾಲ 3.೦೦ ಗಂಟೆಗೆ ಮಾತೃ ಮಂಡಳಿಯ ವಿಶೇಷ ಸಭೆ ಜರಗಿತು.ಜುಲೈ ತಿಂಗಳ 27ನೇ ತಾರೀಕಿನಂದು ಆಚರಿಸುವ ಶ್ರೀ ವರಮಹಾಲಕ್ಷ್ಮಿ ಪೂಜೆಯ ಬಗ್ಗೆ ಪೂರ್ವಭಾವಿಯಾಗಿ ನಡೆದ ಈ ಸಭೆಯಲ್ಲಿ ಪೂಜಾ ಶುಲ್ಕ, ರಶೀದಿ ಪುಸ್ತಕಗಳು, ಕರಪತ್ರ, ಬೇನರ್, ಪೂಜಾ ಸಮಯ, ಪ್ರಸಾದ ವಿತರಣೆ, ಕ್ಲಿನಿಂಗ್, ಲಲಿತಾ ಸಹಸ್ರನಾಮ ಪಾರಾಯಣ, ಇತ್ಯಾದಿ ಹಲವು ವಿಚಾರಗಳನ್ನು ಮುಖ್ಯೋಪಾಧ್ಯಾಯರ ಉಪಸ್ಥಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
       ಶಾಲಾ ಹೂದೋಟದ ದುರಸ್ಥಿ ಎಂಬ ವಿಚಾರದ ಬಗ್ಗೆ ಚರ್ಚಿಸಿದಾಗ ಮುಖ್ಯೋಪಾಧ್ಯಾಯರು ಈಗಿರುವ ಹೂದೋಟದಿಂದ ಉತ್ತಮ ಗಿಡಗಳನ್ನು ಶಾಲಾ ಪರಿಸರದ ಯೋಗ್ಯ ಸ್ಥಳದಲ್ಲಿ ನೆಡಬೇಕೆಂದು ಹೇಳಿದರು. ಮಾತೃ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಗೀತಾ ಕುಮಾರಿಯವರು ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಗೀತಾಂಜಲಿಯವರು ಪ್ರಾರ್ಥಿಸಿ ಧನ್ಯವಾದವಿತ್ತರು.