Friday, June 17, 2016


               
                      
                 ಶಾಲಾ ಪ್ರಾರಂಭೋತ್ಸವ

ನಮ್ಮ ಶಾಲೆಯಲ್ಲಿ ಬೇಸಗೆಯ ಸುದೀರ್ಘ ರಜಾ ಅನುಭವ ಬುತ್ತಿಯೊಂದಿಗೆ ನೂತನ ಶೈಕ್ಷಣಿಕ ವರ್ಷ ೨೦೧೬-೧೭ ಕ್ಕೆ ಆಗಮಿಸುವ ಪುಟಾಣಿ ಮಕ್ಕಳನ್ನು ಹಿರಿಯ ಮಕ್ಕಳೂ ಶಿಕ್ಷಕ, ರಕ್ಷಕ ಬಳಗ ವಿಶೇಷ ರೀತಿಯಲ್ಲಿ ಬರಮಾಡಿಕೊಳ್ಳುವಂತೆ ಪ್ರವೇಶೋತ್ಸವವನ್ನು ವೈವಿಧ್ಯಮಯವಾಗಿ ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ರೇಡಿಯೋ ಕೇಂದ್ರ ಸ್ವರ್ಗ ತರಂಗದ ಮೂಲಕ ಸುಮಧುರ ಪ್ರವೇಶೋತ್ಸವ ಗೀತೆಯನ್ನು ಕೇಳಿಸಲಾಯಿತು. ನಂತರ ಭವ್ಯ ಮೆರವಣಿಗೆಯನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ ವಿ.ಎಸ್ ಹಾಗೂ ಪಂಚಾಯತು ಸದಸ್ಯೆ ಕುಮಾರಿ ಚಂದ್ರಾವತಿ ಇವರು ಪ್ರವೇಶೋತ್ಸವ ಬೇನರನ್ನು ಮಕ್ಕಳಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಸ್ಥಳೀಯ ಶಾಸ್ತಾ ಕ್ಲಬಿನ ಸದಸ್ಯರಿಂದ ನಾಸಿಕ್ ಬ್ಯಾಂಡಿನ ತಾಳಕ್ಕೆ ಸರಿಯಾಗಿ ಕುಣಿಯುವ ವಿವಿಧ ರೀತಿಯ ಬೊಂಬೆ ಕುಣಿತ ಮೆರವಣಿಗೆ ವಿಶೇಷ ಮೆರುಗನ್ನು ನೀಡುವುದರ ಜೊತೆಗೆ ಕೇರಳೀಯ ಉಡುಪು ಧರಿಸಿದ ಹೆಣ್ಣು ಮಕ್ಕಳು ಪುಷ್ಪ,ಪುಗ್ಗೆ ಆಕರ್ಷಕ ಮುಖವಾಡ, ಟೋಪಿ, ಡಿಸ್‌ಪ್ಲೇ ಕೋಲುಗಳನ್ನು ಹಿಡಿದ ಮಕ್ಕಳ ದಂಡು ಎಲ್ಲರನ್ನು ಮನರಂಜಿಸಿತು. ನಂತರ ನವಾಗತ ಮಕ್ಕಳಿಗೆ ಶಾಲಾ ಅಧ್ಯಾಪಿಕೆಯರು ಆರತಿ ಬೆಳಗಿದರೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನ ರವರು ಮಕ್ಕಳ ಹಣೆಗೆ ತಿಲಕವನ್ನು ಹಾಗೂ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್‌ರವರು ಮಕ್ಕಳಿಗೆ ಪುಷ್ಪ ದಳಗಳನ್ನಿತ್ತು ಸ್ವಾಗತಿಸಿದರು. ನಂತರ ಮಕ್ಕಳು ವಿದ್ಯಾಧಿ ದೇವತೆ ಸರಸ್ವತಿಗೆ ಪುಷ್ಪ ದಳಗಳನ್ನು ಸಮರ್ಪಿಸಿ ನಮಸ್ಕರಿಸಿದರು. ಸಭಾ ಕಾರ್ಯಕ್ರಮವನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ್ ವಿ.ಎಸ್ ಇವರು ದ್ವೀಪ ಜಾಲನೆಯ ಮೂಲಕ ಚಾಲನೆಯಿತ್ತರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನರವರು ವಹಿಸಿದ್ದರು. ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ ಮಾಜಿ ಪಂಚಾಯತು ಸದಸ್ಯ ಹಾಗೂ ಉತ್ತಮ ಸಾಹಿತ್ಯಾಸಕ್ತರು ಆದ ಶ್ರೀ ಶ್ರೀನಿವಾಸ ಎಡಮಲೆಯವರು ವಿದ್ಯಾಭ್ಯಾಸದ ಔಚಿತ್ಯವನ್ನು ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿ ಮಾತೃಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ರವರು ಮಗುವನ್ನು ಒಂದು ಉತ್ತಮ ಶಿಲ್ಪಿಯನ್ನಾಗಿಸುವ ಎಲ್ಲಾ ವಿಧದ ಸೌಲಭ್ಯಗಳು ಈ ಶಾಲೆಯಲ್ಲಿ ಲಭಿಸುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ೧ನೇ ತರಗತಿಯ ಮಕ್ಕಳಿಗೆ ದಿವಂಗತ ವಾಲ್ತಾಜೆ ಶ್ರೀಪತಿ ಭಟ್ ಹಾಗೂ ದಿವಂಗತ ವಾಲ್ತಾಜೆ ಶ್ರೀಧರ ಭಟ್ ಸ್ಮರನಾರ್ಥ ನೂತನ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಸ್ಲೇಟು, ಬಳಪ, ಬ್ಯಾಗ್ ಹಾಗೂ ಸಮವಸ್ತ್ರವನ್ನು ಅತಿಥಿಗಳು ವಿತರಿಸಿದರು. ಸಂಸ್ಕ್ರತ ಶಿಕ್ಷಕ ಶ್ರೀ ಕೆ ಶಿವರಾಮ್ ಭಟ್ ರವರು ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ರವರು ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ವಂದನಾರ್ಪಣೆ ಗೈದರು. ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಉಪಹಾರ ಲಿಂಬೆ ಪಾನೀಯ, ಅವಲಕ್ಕಿ, ಹೋಳಿಗೆ, ವ್ಯವಸ್ಥೆಯನ್ನು ಮುಖ್ಯೋಪಾಧ್ಯಾಯರಾದ ಶ್ರೀ.ಪಿ ಶಿವರಾಮ್ ಭಟ್ ರವರು ಮಾಡಿದರು. 



















                                                                  ***********

No comments:

Post a Comment